ಅಪ್ಪನ ಹೆಸರಿನಲ್ಲಿ ದರ್ಬಾರು, ಪ್ರಶ್ನೆ ಮಾಡಿದವರನ್ನ ಹೊರ ದಬ್ಬುವ ಚಾಳಿ! – ಹೆಚ್ಡಿಕೆ ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು: ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಜೆಡಿಎಸ್ನಲ್ಲಿ ಈಗ ಸಿಎಂ ಇಬ್ರಾಹಿಂ ಹಾಗೂ ಎಚ್ಡಿ ಕುಮಾರಸ್ವಾಮಿ ನಡುವೆ ಸಮರ ನಡೆಯುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಕರ್ನಾಟಕ ಕಾಂಗ್ರೆಸ್, ಜೆಡಿಎಸ್ ಹಾಗೂ ಎಚ್ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದೆ. ರಾಜಕೀಯ ತೀರ್ಮಾನ ತೆಗೆದುಕೊಳ್ಳಲು ಕುಮಾರಸ್ವಾಮಿ ಜೆಡಿಎಸ್ ಪಕ್ಷದ ಯಾವುದೇ ಪದಾಧಿಕಾರಿ ಅಲ್ಲ, ಅವರ ಮಾತುಗಳಿಗೆ, ತೀರ್ಮಾನಗಳಿಗೆ ಅವರದ್ದೇ ಪಕ್ಷದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಸತ್ಯ ಏನೆಂದರೆ ಮೈತ್ರಿ ಇರುವುದು ಅಮಿತ್ ಶಾ ಹಾಗೂ ಕುಮಾರಸ್ವಾಮಿ ನಡುವೆ ಹೊರತು ಬಿಜೆಪಿ- ಜೆಡಿಎಸ್ ನಡುವೆ ಅಲ್ಲ. ಇತ್ತ ಬಿಜೆಪಿ ನಾಯಕರಿಗೂ ಮೈತ್ರಿ ಬಗ್ಗೆ ಅಸಮಧಾನ, ಅತ್ತ ಒರಿಜಿನಲ್ ಜೆಡಿಎಸ್ ನವರಿಗೂ ಅಸಮಧಾನ. ಇಂತಹದ್ದನ್ನು ಮೈತ್ರಿ ಎನ್ನಲಾದೀತೆ? ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟು ಹಬ್ಬದ ದಿನ ಇನ್ನುಮುಂದೆ ಸ್ಪೂರ್ತಿ ದಿನ – ಸಿಎಂ ಸಿದ್ದರಾಮಯ್ಯ ಘೋಷಣೆ
ಕುಮಾರಸ್ವಾಮಿಯವರು ರಾಜಕೀಯ ತೀರ್ಮಾನ ತೆಗೆದುಕೊಳ್ಳಲು ಜೆಡಿಎಸ್ ಪಕ್ಷದ ಯಾವುದೇ ಪದಾಧಿಕಾರಿ ಅಲ್ಲ, ಅಪ್ಪನ ಹೆಸರಿನಲ್ಲಿ ನಡೆಸುವ ದರ್ಬಾರು, ಪ್ರಶ್ನೆ ಮಾಡಿದವರನ್ನ ಹೊರ ದಬ್ಬುವ ಚಾಳಿ, ರಾಜ್ಯ ರಾಜಕೀಯ ವ್ಯಾಪಾರದ ದಲ್ಲಾಳಿ. ಕುಮಾರಸ್ವಾಮಿಯವರ ಮಾತುಗಳಿಗೆ, ತೀರ್ಮಾನಗಳಿಗೆ ಅವರದ್ದೇ ಪಕ್ಷದಲ್ಲಿ ನಯಾಪೈಸೆ ಕಿಮ್ಮತ್ತಿಲ್ಲ. ಹೀಗಿರುವಾಗ ಕಾಂಗ್ರೆಸ್ ಪಕ್ಷ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ ಅಧಿಕಾರವಿಲ್ಲದ, ಲೂಟಿಯ ಅವಕಾಶ ವಂಚಿತ ಬಿಜೆಪಿ ಜೆಡಿಎಸ್ ನಾಯಕರು ಮತಿಭ್ರಮಣೆಯಾದಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸಂಬಂಧವೇ ಇಲ್ಲದ ಗುತ್ತಿಗೆದಾರನ ಮನೆಯಲ್ಲಿ ಹಣವಿದ್ದರೆ ಕಾಂಗ್ರೆಸ್ ಗೆ ಸಂಬಂಧ ಕಟ್ಟುವ ಬಿಜೆಪಿಗರು ಚಿಲುಮೆ ಪ್ರಕರಣದಲ್ಲಿ ಆಗಿನ ಹಾಲಿ ಸಚಿವರೊಬ್ಬರಿಗೆ ಸಂಬಂಧಿಸಿದ ದಾಖಲೆಗಳು ನೇರಾನೇರಾ ಸಾಕ್ಷಿಯಾಗಿ ಸಿಕ್ಕಿದ್ದವು. ಚಿಲುಮೆ ಹಗರಣದಲ್ಲಿ ಇಡೀ ಬಿಜೆಪಿ ಕೈವಾಡವಿರುವುದನ್ನು ಬಿಜೆಪಿ ಬಹಿರಂಗವಾಗಿ ಒಪ್ಪಿಕೊಳ್ಳುವುದೇ?? ಎಂದು ಪ್ರಶ್ನಿಸಿದೆ.
ಭ್ರಷ್ಟಾಚಾರದಲ್ಲಿ ಜೈಲಿಗೆ ಹೋದವರು ಬಿಜೆಪಿಗರು, ಕಮಿಷನ್ ಕಲೆಕ್ಷನ್ ನಲ್ಲಿ ರಾಜೀನಾಮೆ ಕೊಟ್ಟವರೂ ಬಿಜೆಪಿಗರು. ಕಮಿಷನ್, ಭ್ರಷ್ಟಾಚಾರಗಳ ಬಗ್ಗೆ ಸ್ವಪಕ್ಷದವರಿಂದಲೇ ಟೀಕೆಗೆ ಒಳಗಾಗಿದ್ದು ಬಿಜೆಪಿ. ಹೈಕಮಾಂಡಿಗೆ ಹಫ್ತಾ ಕೊಡುತ್ತಿದ್ದಿದ್ದೂ ಬಿಜೆಪಿ. ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದೂ ಬಿಜೆಪಿ. ಇಂತಹ ಭ್ರಷ್ಟ ಜನತಾ ಪಾರ್ಟಿ ಕಾಂಗ್ರೆಸ್ ಕಡೆ ಕೈ ತೋರಿಸುವುದು ಕೋತಿ ಮೊಸರು ತಿಂದು ಮೇಕೆಯತ್ತ ಕೈ ತೋರಿಸಿದಂತೆಯೇ ಸರಿ ಎಂದು ವ್ಯಂಗ್ಯವಾಡಿದೆ.