ಪರಶುರಾಮ ಥೀಮ್ ಪಾರ್ಕ್ ನಲ್ಲಿದ್ದ ಪುತ್ಥಳಿ ರಾತ್ರೋರಾತ್ರಿ ಮಾಯ – ಶಾಸಕ ಸುನಿಲ್ ಕುಮಾರ್ ಮೇಲೆಯೇ ಕಾಂಗ್ರೆಸ್ಸಿಗರ ಅನುಮಾನ
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಪರಶುರಾಮ ಥೀಮ್ ಪಾರ್ಕ್ ಪ್ರವಾಸ ಸ್ಥಳ ಅನ್ನೋದಕ್ಕಿಂತ ವಿವಾದದಿಂದಲೇ ಹೆಚ್ಚು ಸುದ್ದಿ ಮಾಡ್ತಿದೆ. ಕಾಮಗಾರಿ ಶುರುವಾದಾಗಿನಿಂದಲೂ ಒಂದಿಲ್ಲೊಂದು ರೀತಿ ವಿವಾದ ಸೃಷ್ಟಿಯಾಗಿದೆ. ಇದೀಗ ಪರಶುರಾಮನ ವಿಗ್ರಹ ಮಾಯವಾಗಿದ್ದು ಪಾದ ಮತ್ತು ಕಾಲು ಮಾತ್ರ ಉಳಿದಿದೆ. ವಿಗ್ರಹದ ಸೊಂಟದ ಮೇಲ್ಬಾಗ ಕಾಣೆಯಾಗಿದೆ. ಡ್ರೋನ್ ಕ್ಯಾಮೆರಾದಲ್ಲಿ ಮೂರ್ತಿ ಮಾಯವಾಗಿರುವ ವಿಷಯ ಬಹಿರಂಗವಾಗಿದೆ. ಮೂರ್ತಿ ಹುಡುಕಿಕೊಡುವಂತೆ ದಿವ್ಯ ನಾಯಕ್ ಎಂಬವರು ನಗರ ಠಾಣೆಯ ಮೆಟ್ಟಿಲು ಏರಿದ್ದಾರೆ. ಮತ್ತೊಂದೆಡೆ ಫೈಬರ್ ಪ್ರತಿಮೆ ಸ್ಥಾಪಿಸಿ ದ್ರೋಹವೆಸಗಿದ್ದಾರೆ ಎಂದು ಆರೋಪಿಸಿ, ಶಾಸಕ ಸುನಿಲ್ ಕುಮಾರ್ ವಿರುದ್ಧ ಕಾರ್ಕಳ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದೆ.
ಇದನ್ನೂ ಓದಿ : ಸಂಸತ್ತಿನಲ್ಲಿ ಮೋದಿ & ಅದಾನಿ ವಿರುದ್ಧ ಪ್ರಶ್ನೆ ಕೇಳಲು ಲಂಚ ಸ್ವೀಕಾರ – ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಗಂಭೀರ ಆರೋಪ
ಪರಶುರಾಮ ಥೀಮ್ ಪಾರ್ಕ್ ಒಟ್ಟಾರೆ 11.54 ಕೋಟಿ ರೂಗಳ ಯೋಜನೆಯಾಗಿದ್ದು, ಅದರಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಪರಶುರಾಮನ ಕಂಚಿನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಕೆಂಗೇರಿಯ ಪ್ರತಿಮೆ ತಯಾರಿ ಸಂಸ್ಥೆಯೊಂದಕ್ಕೆ ಇದರ ಕಾಂಟ್ರಾಕ್ಟ್ ನೀಡಲಾಗಿತ್ತು. ಆದರೆ ಕಾಂಟ್ರಾಕ್ಟ್ ದಾರರಿಗೆ ಕೇವಲ 1 ಕೋಟಿ ರೂ ಅಷ್ಟೇ ಪಾವತಿಯಾಗಿತ್ತು. ಹಣ ಪೂರ್ತಿ ಸಿಗದೆ ಅರ್ಧ ಮೂರ್ತಿಯನ್ನಷ್ಟೇ ನಿರ್ಮಿಸಿಕೊಟ್ಟಿದ್ರು. ಉಳಿದ ಭಾಗವನ್ನು ತರಾತುರಿಯಲ್ಲಿ ಫೈಬರ್ ನಿಂದ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕಂಚಿನ ಪ್ರತಿಮೆ ಅಂತಾ ಹೇಳಿದ್ರೂ ಕೂಡ ಕೊನೇ ಗಳಿಗೆಯಲ್ಲಿ ಫೈಬರ್ನಿಂದ ಮೂರ್ತಿ ತಯಾರಿಸಿರೋ ಆರೋಪ ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ಥೀಮ್ ಪಾರ್ಕ್ಗೆ ಭೇಟಿ ನೀಡಿದ್ದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಷಯ ತಿಳಿದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಸಲಿಗೆ ಪರಶುರಾಮನ ವಿಗ್ರಹ ಸ್ಥಾಪನೆ ಬಳಿಕ ಮೂರ್ತಿಯ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಮೂರ್ತಿ ನೈಜತೆಯನ್ನು ಬಹಿರಂಗ ಪಡಿಸುವಂತೆ ಸಮಾನ ಮನಸ್ಕರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಷ್ಟೆ ಅಲ್ಲದೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಪರಶುರಾಮ ವಿಗ್ರಹ ನಾಪತ್ತೆಯಾಗಿದ್ದು ಕಾರ್ಕಳ ನಗರ ಠಾಣೆಯಲ್ಲಿ ಕೇಸ್ ಕೂಡ ಫೈಲ್ ಆಗಿದೆ. ಮೂರ್ತಿ ನಾಪತ್ತೆಯಾಗಿರೋದ್ರ ಹಿಂದೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕೈವಾಡವಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಕಾರ್ಕಳದಲ್ಲಿ ಥೀಂ ಪಾರ್ಕ್ ನಿರ್ಮಾಣ ಮಾಡಿ ಅದರ ಕ್ರೆಡಿಟ್ ತೆಗೆದುಕೊಂಡಿದ್ದ ಸುನಿಲ್ ಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದ್ರೆ ಪ್ರತಿಮೆಯಲ್ಲಿ ಬಿರುಕು ಹಾಗೂ ರಂದ್ರಗಳು ಕಂಡು ಬಂದಿದ್ದರಿಂದ ಭಾರೀ ವಿವಾದ ಉಂಟಾಗಿತ್ತು. ಇದರ ನಡುವೆಯೇ ಥೀಮ್ ಪಾರ್ಕ್ನ 33 ಅಡಿ ಎತ್ತರದ ಪರಶುರಾಮನ ಮೂರ್ತಿ ರಾತ್ರೋರಾತ್ರಿ ನಾಪತ್ತೆ ಆಗಿದೆ. ಇದರ ಹಿಂದೆ ಶಾಸಕ ಸುನಿಲ್ ಕುಮಾರ್ ಕೈವಾಡವಿದೆ. ಕೋಟಿಗಟ್ಟಲೆ ಭ್ರಷ್ಟಾಚಾರ ನಡೆದಿದ್ದು ಅದನ್ನ ಮುಚ್ಚಿ ಹಾಕಲು ಶಾಸಕರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಹಾಗೇ ಥೀಮ್ ಪಾರ್ಕ್ ಹಗರಣವನ್ನ ಸಿಬಿಐ ತನಿಖೆಗೆ ಒಪ್ಪಿಸಿ ಶಾಸಕರನ್ನ ವಿಚಾರಣೆಗೆ ಒಳಪಡಿಸಿದ್ರೆ ಸತ್ಯ ಹೊರಬರುತ್ತೆ ಎಂದು ಆಗ್ರಹಿಸುತ್ತಿದ್ದಾರೆ. ಒಟ್ಟಾರೆ ಮೂರ್ತಿ ಕಳವಿನ ಹಿಂದೆ ಹಲವು ಅನುಮಾನಗಳಿದ್ದು ಸಮಗ್ರ ತನಿಖೆ ಬಳಿಕವಷ್ಟೇ ಸತ್ಯ ಹೊರ ಬರಲಿದೆ.