ನಾನ್ ಸ್ಟಿಕ್ ಪಾತ್ರೆ ಬಳಸುವ ಮುನ್ನ ಎಚ್ಚರ! – ಹೊಟ್ಟೆ ಸೇರುತ್ತೆ ಅಪಾಯಕಾರಿ ಕೆಮಿಕಲ್ಸ್!
ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಅಡುಗೆ ಮಾಡಲು ನಾನ್ ಸ್ಟಿಕ್ ಪಾತ್ರೆಗಳನ್ನೇ ಬಳಸುತ್ತಾರೆ. ದೋಸೆ, ಆಮ್ಲೆಟ್, ಚಪಾತಿ ಹೀಗೆ ಯಾವುದನ್ನು ತಯಾರಿಸುವುದಾದರೂ ನಾನ್ ಸ್ಟಿಕ್ ಪ್ಯಾನ್ನಲ್ಲಿ ತಯಾರಿಸುವುದು ಸುಲಭ ಅನ್ನೋ ಕಾರಣಕ್ಕೆ ಹೆಚ್ಚಾಗಿ ನಾನ್ ಸ್ಟಿಕ್ ಪಾತ್ರೆಯನ್ನೇ ಖರೀದಿಸುತ್ತಾರೆ. ಈ ಪಾತ್ರೆಯ ಬಳಕೆಯಿಂದ ಕಡಿಮೆ ಪ್ರಮಾಣದ ಎಣ್ಣೆ ಆಹಾರಕ್ಕೆ ಸೇರಿಕೊಳ್ಳುತ್ತದೆ ಎಂಬುದೂ ಕೆಲವರ ಅಭಿಪ್ರಾಯ. ಅಷ್ಟೇ ಅಲ್ಲ ಇತರ ಪಾತ್ರೆಗಳಿಗೆ ಹೋಲಿಸಿದರೆ ಇದರಲ್ಲಿ ಆಹಾರವನ್ನು ಬೇಯಿಸುವಾಗ ಬೇಗನೇ ಪಾತ್ರೆಗೆ ಅಂಟಿಕೊಳ್ಳುವುದಿಲ್ಲ, ತಳ ಹಿಡಿಯುವುದಿಲ್ಲ ಎಂಬ ಕಾರಣವೂ ಇದೆ. ಅಲ್ಲದೆ, ಈ ಪಾತ್ರೆಯನ್ನು ತೊಳೆಯಲು ಸುಲಭ ಎಂಬ ಕಾರಣಕ್ಕೂ ಖರೀದಿಸುವವರಿದ್ದಾರೆ, ಆದರೆ ಈ ರೀತಿಯ ನಾನ್ ಸ್ಟಿಕ್ ಪಾತ್ರೆಗಳ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದೆ.
ಇದನ್ನೂ ಓದಿ: 10 ಗಂಟೆಗಿಂತ ಹೆಚ್ಚು ಹೊತ್ತು ಕೂತ್ರೆ ಜೀವಕ್ಕೆ ಕಂಟಕ? -ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್ ವಿಚಾರ!
ನಾನ್ಸ್ಟಿಕ್ ಪಾತ್ರೆಗಳನ್ನು ತಯಾರಿಸಲು ಸಿಂಥೆಟಿಕ್ ಕೆಮಿಕಲ್ಗಳನ್ನು ಬಳಸಲಾಗುತ್ತೆ. ಈ ರಾಸಾಯನಿಕ ಆರೋಗ್ಯಕ್ಕೆ ಬಹಳ ಅಪಾಯಕಾರಿ. ನಾನ್ಸ್ಟಿಕ್ನಲ್ಲಿರುವ ಟೆಫ್ಲಾನ್ ಅಂಶ ಆರೋಗ್ಯಕ್ಕೆ ಒಳ್ಳೆಯದಲ್ಲ. ಅತಿ ಬಿಸಿಯಾದಾಗ ಟೆಫ್ಲಾನ್ ಕೆಮಿಕಲ್ ತನ್ನ ಅಂಶವನ್ನು ಬಿಡುತ್ತದೆ. ಇದರಿಂದಾಗಿ ಕ್ಯಾನ್ಸರ್ನಂತಹ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಸಾದ್ಯತೆ ಇದೆ ಅಂತಾ ಅಧ್ಯಯನದಿಂದ ಗೊತ್ತಾಗಿದೆ. ನಾನ್ ಸ್ಟಿಕ್ ಪಾತ್ರೆಗಳಲ್ಲಿ ತಾಪಮಾನವು 260 ಡಿಗ್ರಿ ಸೆಲ್ಸಿಯಸ್ ಮೀರುವುದಿಲ್ಲವೋ ಅಲ್ಲಿಯವರೆಗೆ ನಾನ್ಸ್ಟಿಕ್ ಪಾತ್ರೆಯಲ್ಲಿ ಮಾಡಿದ ಆಹಾರದಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ. ಇದಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ನಾನ್ಸ್ಟಿಕ್ನಲ್ಲಿರುವ ಟೆಫ್ಲಾನ್ ಲೇಪನಗಳು ಒಡೆಯಲು ಪ್ರಾರಂಭಿಸಬಹುದು. ಅಂದರೆ ಪಾತ್ರೆ ಕರಟಲು ಬಿಟ್ಟರೆ ನಾನ್ ಸ್ಟಿಕ್ ಪಾತ್ರೆ ಅಪಾಯಕಾರಿಯಾಗುತ್ತವೆ.