ಇಂದು 2023 ರ ಕೊನೆಯ ಸೂರ್ಯಗ್ರಹಣ – ಭಾರತದಲ್ಲೂ ಕಾಣುವುದೇ ʼರಿಂಗ್ ಆಫ್ ಫೈರ್ʼ?
ಆಕಾಶದಲ್ಲಿ ನಡೆಯುವ ವಿಸ್ಮಯಗಳನ್ನು ಆಸ್ಥೆಯಿಂದ ವೀಕ್ಷಿಸುವ ಕಣ್ಣುಗಳಿಗೆ ಇಂದು ಹಬ್ಬವೋ ಹಬ್ಬ. ಶನಿವಾರ ಆಕಾಶದಲ್ಲಿ ನಡೆಯುವ ವಿಸ್ಮಯವೊಂದು ರೋಚಕ ಖಗೋಳ ಅನುಭವವನ್ನು ನೀಡಲಿದೆ. ಅಂದರೆ ಇಂದು ಈ ವರ್ಷದ ಎರಡನೆಯ ಹಾಗೂ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ.
2012ರಲ್ಲಿ ಈ ರಿಂಗ್ ಫೈರ್ ಗೋಚರವಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಹಲವು ಭಾಗಗಳಲ್ಲಿ ಈ ರಿಂಗ್ ಆಫ್ ಫೈರ್ ಕಾಣಿಸಲಿದೆ. ಈ ಅಪರೂಪದ ಖಗೋಳ ದೃಶ್ಯವು ಚಂದ್ರನು ಸೂರ್ಯ ಹಾಗೂ ಭೂಮಿಯ ನಡುವೆ ಚಲಿಸಿ ಸೂರ್ಯನನ್ನು ಭಾಗಶಃ ಮೆರ ಮಾಡಿದಾಗ ಈ ಅಗ್ನಿಯ ವರ್ತುಲ ಗೋಚರವಾಗುತ್ತದೆ. ಇದು ಸೂರ್ಯನ ಸುತ್ತಲೂ ಉಂಗುರದಂತೆ ಗೋಚರಿಸುತ್ತದೆ. ಈ ಸಮಯದಲ್ಲಿ ಚಂದ್ರನು ಭಾಗಶಃ ಸೂರ್ಯನನ್ನು ಸುತ್ತುವರಿಯುವ ಕಾರಣ ಸೂರ್ಯನ ಆಕಾರವು ವಿಶಿಷ್ಟವಾಗಿ ಕಾಣುತ್ತದೆ. ಆ ಕಾರಣಕ್ಕೆ ಇದಕ್ಕೆ ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ. ಆದರೆ ಭಾರತೀಯರಿಗೆ ನಿರಾಸೆಯಾಗಿದೆ.
ಭಾರತದಲ್ಲೂ ನೋಡಬಹುದೇ ರಿಂಗ್ ಆಫ್ ಫೈರ್
ಆಕಾಶದಲ್ಲಿನ ಈ ವಿನೂತನ ಸೊಗಬನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗೋದಿಲ್ಲ. ಸೂರ್ಯಗ್ರಹಣವನ್ನು ಪಶ್ಚಿಮ ಗೋಳಾರ್ಧದ ಜನರು ವೀಕ್ಷಿಸಬಹುದು. timeanddate.com ಅವರ ಪ್ರಕಾರ ಈ ಗ್ರಹಣವು ಅಮೆರಿಕದ ಒರೆಗಾನ್‌ನಿಂದ ಟೆಕ್ಸಾಸ್‌ವರೆಗೆ ಕಿರಿದಾದ ಹಾದಿಯಲ್ಲಿ ಇದು ಗೋಚರಿಸುತ್ತದೆ. ನಂತರ ಇದು ಮೆಕ್ಸಿಕೊದ ಯುಕಾಟಾನ್, ಪೆನಿನ್ಸುಲಾ, ಬೆಲೀಜ್, ಗ್ವಾಟೆಮಾಲಾ, ಹೊಂಡುರಾಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ ಕೊಲಂಬಿಯಾ ಮತ್ತು ಬ್ರೆಜಿಲ್‌ನ ಭಾಗಗಳಲ್ಲಿ ಹಾದು ಹೋಗುತ್ತದೆ. ಅಮೆರಿಕದ ಇತರೆಡೆಗಳಲ್ಲಿ ಅಲಾಸ್ಕಾದಿಂದ ಅರ್ಜೆಂಟೀನಾವರೆಗೆ ಭಾಗಶಃ ಸೌರ ಗ್ರಹಣ ಗೋಚರವಾಗುತ್ತದೆ. ಈತನ್ಮದ್ಯೆ 2039ರ ಜೂನ್ 21ರವರೆಗೆ ಅಮೆರಿಕದಲ್ಲಿ ಗೋಚರಿಸುವ ಕೊನೆಯ ವಾರ್ಷಿಕ ಸೂರ್ಯಗ್ರಹಣ ಇದಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶುಭ್ರ ಆಗಸದಲ್ಲಿ ಉರಿಯುವ ರಿಂಗ್ ನಂತೆ ಕಾಣಿಸಿಕೊಳ್ಳಲಿದ್ದಾನೆ ರವಿಮಾಮ! – ಅ. 14ರಂದು ಸಂಭವಿಸಲಿದೆ ಸೂರ್ಯಗ್ರಹಣ
ವಾರ್ಷಿಕ ಸೂರ್ಯಗ್ರಹಣದ ದಿನಾಂಕ ಮತ್ತು ಸಮಯ
ನಾಸಾ ನೀಡಿರುವ ಮಾಹಿತಿಯ ಪ್ರಕಾರ, ಈ ಆನ್ಯುಲರ್ ಸೌರ ಗ್ರಹಣವು ಒಂದು ಸ್ಥಳದಲ್ಲಿ ಆರಂಭವಾಗಿ ಇನ್ನೊಂದು ಸ್ಥಳದಲ್ಲಿ ಅಂತ್ಯವಾಗುತ್ತದೆ. ಇಂದು ಬೆಳಿಗ್ಗೆ 9.13 (PDT- ಫೆಸಿಫಿಕ್ ಟೈಮ್) ಕ್ಕೆ ಒರೆಗಾನ್‌ನಲ್ಲಿ ಆರಂಭವಾಗಿ, ರಾತ್ರಿ 12.03ಕ್ಕೆ ಟೆಕ್ಸಾಸ್‌ನಲ್ಲಿ ಮುಕ್ತಾಯಗೊಳ್ಳುತ್ತದೆ.
ಏನಿದು ವಾರ್ಷಿಕ ಸೂರ್ಯಗ್ರಹಣ?
ಚಂದ್ರನು ಭೂಮಿಯಿಂದ ಅತ್ಯಂತ ದೂರದಲ್ಲಿದ್ದ ಸಂದರ್ಭದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಹಾದು ಹೋದಾಗ ವಾರ್ಷಿಕ ಸೌರ ಗ್ರಹಣ ಅಥವಾ ಅಗ್ನಿಯ ವರ್ತುಲ (ರಿಂಗ್ ಆಫ್ ಫೈರ್) ಸಂಭವಿಸುತ್ತದೆ. ಚಂದ್ರನು ಭೂಮಿಯಿಂದ ದೂರದಲ್ಲಿರುವುದರಿಂದ, ಅದು ಸೂರ್ಯನಿಗಿಂತ ಚಿಕ್ಕದಾಗಿ ಕಾಣುತ್ತದೆ ಮತ್ತು ಅದರ ಸುತ್ತಲೂ ಉಂಗುರವನ್ನು ರೂಪಿಸಲು ಸಾಧ್ಯವಾಗುತ್ತದೆ.