ವಿರಾಟ್ ಕೊಹ್ಲಿ – ನವೀನ್ ಉಲ್ ಹಕ್ ಪ್ರೀತಿಯ ಅಪ್ಪುಗೆ – ಅಭಿಮಾನಿಗಳ ಕಣ್ಣೆದುರೇ ಕ್ರಿಕೆಟಿಗರ ಭಾವನಾತ್ಮಕ ಬೆಸುಗೆ

ವಿರಾಟ್ ಕೊಹ್ಲಿ – ನವೀನ್ ಉಲ್ ಹಕ್ ಪ್ರೀತಿಯ ಅಪ್ಪುಗೆ – ಅಭಿಮಾನಿಗಳ ಕಣ್ಣೆದುರೇ ಕ್ರಿಕೆಟಿಗರ ಭಾವನಾತ್ಮಕ ಬೆಸುಗೆ

ಕ್ರಿಕೆಟ್ ಆಟ ಬರೀ ಕ್ರೀಡೆಯಲ್ಲ. ಇದು ಅಭಿಮಾನಿಗಳ ಜೊತೆಗೆ ಬೆಸೆದುಕೊಂಡ ಭಾವನಾತ್ಮಕ ಆಟ. ಕ್ರೀಡಾಂಗಣದಲ್ಲೂ ಒಮ್ಮೊಮ್ಮೆ ಇದು ಸಾಬೀತಾಗುತ್ತಲೇ ಇರುತ್ತದೆ. ಇದೀಗ ವಿರಾಟ್ ಕೊಹ್ಲಿ-ನವೀನ್ ಉಲ್ ಹಕ್ ವಿಚಾರದಲ್ಲೂ ಹೀಗೆ ಆಗಿದೆ. ಇವರಿಬ್ಬರ ನಡುವಿನ ವಿವಾದ ಅಭಿಮಾನಿಗಳ ಕಣ್ಣೆದುರೇ ಸುಖಾಂತ್ಯಗೊಂಡಿದೆ.

ಇದನ್ನೂ ಓದಿ:   ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಗೆಲುವಿನ ಓಟ – ಅಬ್ಬರಿಸಿದ ಹಿಟ್‌ಮ್ಯಾನ್, ಬೆಚ್ಚಿಬಿದ್ದ ಅಫ್ಘಾನಿಸ್ತಾನ್

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ-ನವೀನ್ ಉಲ್ ಹಕ್ ವಿವಾದದಿಂದಾಗಿ ಈ ಪಂದ್ಯ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಪಂದ್ಯದ ಆರಂಭದಿಂದಲೇ ವಿರಾಟ್ ಕೊಹ್ಲಿ ಪರ ಘೋಷಣೆಗಳು ಮೊಳಗಿದ್ದವು. ಅದರಲ್ಲೂ ನವೀನ್ ಉಲ್ ಹಕ್ ಬ್ಯಾಟಿಂಗ್‌ಗೆ ಇಳಿದಾಗ ಕೊಹ್ಲಿ ಪರ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು. ನಂತರ ಭಾರತ ತಂಡದ ಬ್ಯಾಟಿಂಗ್ ವೇಳೆ ಇಶಾನ್ ಕಿಶನ್ ಔಟಾದ ನಂತರ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಕ್ರೀಸ್‌ನಲ್ಲಿ ಮುಖಾಮುಖಿಯಾದರು. ನವೀನ್ ವಿರುದ್ಧ ಕೊಹ್ಲಿ ಹೆಚ್ಚು ರನ್ ಗಳಿಸಲಿಲ್ಲ. ಅತ್ತ ನವೀನ್ ಉಲ್ ಹಕ್‌ಗೂ ಕೊಹ್ಲಿಯನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಕೊಹ್ಲಿ ಪರ ಘೋಷಣೆಗಳು ಜೋರಾಗಿಯೇ ಕೇಳಿಬರುತ್ತಿತ್ತು. ಆದರೆ ಕೊಹ್ಲಿ ತಮ್ಮ ದೆಹಲಿ ಅಭಿಮಾನಿಗಳಿಗೆ ಕೈ ಬೀಸಿ ನವೀನ್ ಅವರ ಮುಂದೆ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಸೂಚಿಸಿದರು. ಅಷ್ಟೇ ಅಲ್ಲದೆ ಇಬ್ಬರೂ ಆಟಗಾರರು ಕೈಕುಲುಕಿ ಅಪ್ಪಿಕೊಂಡರು. ಈ ಮೂಲಕ ಈ ಹಿಂದಿನ ಎಲ್ಲಾ ವಿವಾದಕ್ಕೂ ಇಬ್ಬರು ಆಟಗಾರರು ತೆರೆ ಎಳೆದಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೊಹ್ಲಿ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

 

Sulekha