ನಿನ್ನ ಬಳಿ ಸಾಲ ತಗೊಳಲ್ಲ ಎಂದ ಮಹಿಳೆ.. – ಚೂರಿಯಿಂದ ತಿವಿದು ತಾನೂ ವಿಷ ಕುಡಿದ ಪಾಪಿ!
ಸರಿಯಾದ ಸಮಯಕ್ಕೆ ಸಾಲ ಕಟ್ಟಿಲ್ಲ ಅಂದ್ರೆ ಸಾಲ ವಸೂಲಿ ಮಾಡುವವರು ಧಮ್ಕಿ ಹಾಕುತ್ತಾರೆ. ನಿಗದಿತ ಸಮಯದಲ್ಲಿ ಸಾಲ ಕಟ್ಟಬೇಕು. ಇಲ್ಲದಿದ್ದರೆ ಮನೆಯಲ್ಲಿರುವ ವಸ್ತುಗಳನ್ನು ಹೊತ್ತೊಯ್ಯಲಾಗುವುದು ಅಂತಾ ಅವಾಜ್ ಹಾಕುತ್ತಾರೆ. ಇನ್ನು ಸಾಲ ಸರಿಯಾಗಿ ಪಾವತಿಸಿಲ್ಲ ಅಂತಾ ಹಲ್ಲೆ ಮಾಡಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಆದ್ರೆ ಇಲ್ಲೊಂದು ಕಡೆ ಮಹಿಳೆ ತನ್ನ ಬಳಿ ಸಾಲ ಪಡೆದುಕೊಂಡಿಲ್ಲ ಎಂದು ಭೂಪನೊಬ್ಬ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಏನಿದು ಘಟನೆ?
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ನಯನಾ ಪ್ರವೀಣ ಶೆಟ್ಟಿ ಎಂಬಾಕೆ ಬೇರೆಯವರ ಬಳಿ ಸಾಲ ಪಡೆದ್ದಾರೆ. ಇದರಿಂದ ಸಿಟ್ಟಿಗೆದ್ದ ಮಲ್ಲಿಕಾರ್ಜುನ ಕುಂಬಾರ ಎಂಬಾತ ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಹಳಿ ತಪ್ಪಿ ಉರುಳಿದ ರೈಲು- ನಾಲ್ವರು ಪ್ರಯಾಣಿಕರು ದುರ್ಮರಣ, 80ಕ್ಕೂ ಹೆಚ್ಚು ಮಂದಿಗೆ ಗಾಯ
ಮಹಿಳೆ ಸಾಲ ನಿರಾಕರಿಸಿದ್ದೇಕೆ?
ಆರೋಪಿ ಮಲ್ಲಿಕಾರ್ಜುನ್ ಕಳೆದ ಒಂದು ವರ್ಷದ ಹಿಂದೆ ನಯನಾ ಪತಿಗೆ 1 ಲಕ್ಷ ಸಾಲ ನೀಡಿದ್ದ. ಸಾಲ ಪಡೆದ ಹಣವನ್ನು ನಯನಾ ಪತಿ ಪ್ರವೀಣ್ ಮತ್ತೆ ಮರಳಿ ಕೊಟ್ಟಿದ್ದರು. ಆಗ ಮಲ್ಲಿಕಾರ್ಜುನ್, ಮತ್ತೆ ಏನಾದರೂ ಸಾಲ ಬೇಕಾದರೆ ತೆಗೆದುಕೊಳ್ಳಿ ಎಂದಿದ್ದ. ಈ ವೇಳೆ ನಯನಾ, ನೀವು ಕೊಟ್ಟ ಹಣಕ್ಕೆ ಜಾಸ್ತಿ ಬಡ್ಡಿ ತೆಗೆದುಕೊಳ್ತಿರಿ ನಮಗೆ ಸಾಲ ಬೇಡ ಎಂದಿದ್ದರು. ಇದೇ ಕಾರಣಕ್ಕೆ ನಯನಾ ಮೇಲೆ ಆರೋಪಿ ಮಲ್ಲಿಕಾರ್ಜುನ್ ಸಿಟ್ಟಾಗಿದ್ದನು. ಕಳೆದ 2 ದಿನಗಳ ಹಿಂದೆ ನಯನಾ ಮೇಲೆ ಮಲ್ಲಿಕಾರ್ಜುನ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಹಲ್ಲೆ ನಡೆಸಿದ ಬಳಿಕ ತಾನು ವಿಷ ಸೇವಿಸಿ ಭೂಪ
ಹಲ್ಲೆ ನಡೆಸಿದ ಬಳಿಕ ಮಲ್ಲಿಕಾರ್ಜುನ್ ಕೂಡಲೇ ಮನೆಗೆ ಬಂದಿದ್ದಾನೆ. ಬಳಿಕ ಆತ ಕೂಡ ವಿಷ ಸೇವಿಸಿದ್ದಾನೆ. ಕೂಡಲೇ ಕುಟುಂಬಸ್ಥರು ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆ ಸಂಬಂಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.