ಬೆಂಗಳೂರು ಕಂಬಳಕ್ಕೆ ಕೌಂಟ್‌ಡೌನ್ ಶುರು – 78 ಜೋಡಿ ಕೋಣಗಳು ನೋಂದಣಿ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯಲಿದೆ. ನವೆಂಬರ್ 25, 26 ರಂದು ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದೆ. ಬುಧವಾರ ಕಂಬಳದ ಕೆರೆ ಪೂಜೆ ನೆರವೇರಿಸಲಾಗಿದೆ. ಕಂಬಳಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದಲ್ಲಿ ಭಾಗವಹಿಸಲು ಬರೋಬ್ಬರಿ 78 ಕೋಣಗಳು ನೋಂದಣಿಯಾಗಿದೆ ಎಂದು ವರದಿಯಾಗಿದೆ.
ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ಕರಾವಳಿ ಕ್ರೀಡೆ ಆಯೋಜನೆ ಮಾಡಲಾಗಿದೆ. ಬೆಂಗಳೂರು ಕಂಬಳ- ನಮ್ಮ ಕಂಬಳ ಎಂಬ ಪರಿಕಲ್ಪನೆಯಲ್ಲಿ ಕಂಬಳ ಅಯೋಜನೆ ಮಾಡಲಾಗಿದೆ. ಈಗಾಗಲೇ ಕಂಬಳಕ್ಕೆ ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕ್ರೀಡೆಗೆ ಈಗಾಗಲೇ 78 ಜತೆ ಕೋಣಗಳ ನೋಂದಣಿ ಆಗಿದೆ.
ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಸಿಲಿಕಾನ್ ಸಿಟಿ – ಅರಮನೆ ಮೈದಾನದಲ್ಲಿ ಕಂಬಳದ ಕೆರೆ ಪೂಜೆ
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಕಂಬಳ ಆಯೋಜನಾ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ರೈ, ಬೆಂಗಳೂರಿನಲ್ಲಿ ಪ್ರಥಮ ಬಾರಿ ಕಂಬಳ ನಡೆಯುತ್ತಿರುವ ಕಾರಣ ಬಹಳ ಅಚ್ಚುಕಟ್ಟಾದ ವ್ಯವಸ್ಥೆಗೆ ಗಮನ ಹರಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಸಮಿತಿ ರಚಿಸಲಾಗಿದ್ದು, ವೆಬ್‌ಸೈಟ್ ಮೂಲಕ ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ. ತುಳುನಾಡಿನ ಈ ಜಾನಪದ ಕ್ರೀಡೆ ಉತ್ತಮವಾಗಿ ನಡೆದು, ಇಡೀ ದೇಶಕ್ಕೆ ತುಳುನಾಡಿನ ಶ್ರಿಮಂತ ಪರಂಪರೆ ಪರಿಚಯವಾಗಬೇಕು ಎಂಬ ಉದ್ದೇಶವಿದೆ ಎಂದರು.
ಕೋಣಗಳ ಮಾಲೀಕರು ದೂರದ ಬೆಂಗಳೂರಿಗೆ ಕೋಣಗಳನ್ನು ತರುವ ವಿಚಾರದಲ್ಲಿ ನಮಗೆ ಆರಂಭದಲ್ಲಿ ಆತಂಕವಿತ್ತು. ಇದಕ್ಕಾಗಿ ಕಂಬಳದ ಯಜಮಾನರ ಸಭೆ ನಡೆಸಲಾಗಿತ್ತು. ಪ್ರಸ್ತುತ ಯಜಮಾನರ ಉತ್ಸಾಹ ಖುಷಿ ನೀಡಿದೆ. ಈಗಾಗಲೇ 78 ಜತೆ ಕೋಣಗಳ ನೋಂದಣಿ ಮುಗಿದಿದೆ ಎಂದು ಮಾಹಿತಿ ನೀಡಿದ್ದಾರೆ.
ನ.24ರಂದು ಮಂಗಳೂರಿನಿಂದ ಹೊರಡುವ ಬೆಂಗಳೂರು ರೈಲಿನ ಟಿಕೆಟ್‌ಗಳು ಈಗಾಗಲೇ ಬುಕ್ ಆಗಿವೆ. ಇನ್ನೂ ಒಂದೆರಡು ರೈಲುಗಳನ್ನು ಆ ದಿನ ಓಡಿಸುವಂತೆ ಕಂಬಳ ಸಮಿತಿಯಿಂದ ರೈಲ್ವೆಗೆ ಮನವಿ ಮಾಡಲಾಗಿದೆ. ಆ ದಿನ ಹೊರಡುವ ಕೆಎಸ್‌ಆರ್‌ಸಿ ಬಸ್‌ಗಳ ಟಿಕೆಟ್‌ಗಳೂ ಬುಕ್ ಆಗಿವೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಿಂದಲೇ ಸುಮಾರು 15 ಸಾವಿರ ಮಂದಿ ಕಂಬಳಕ್ಕೆ ಬರುವ ನಿರೀಕ್ಷೆ ಇದೆ. ಇದಲ್ಲದೆ ಬೆಂಗಳೂರಿನ ಜನ, ಅಲ್ಲಿರುವ ಕರಾವಳಿಗರು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ. ಸಚಿವರು ಕೂಡ ಫೋನ್ ಮಾಡಿ ಕಂಬಳದ ಬಗ್ಗೆ ಕಾತರತೆ ತೋರಿದ್ದಾರೆ ಎಂದು ವಿವರಿಸಿದರು.