ಭೂಕಂಪದಿಂದ ನಲುಗಿದ್ದ ಅಫ್ಘಾನಿಸ್ತಾನದಲ್ಲಿ ಮತ್ತೆ 6.3 ತೀವ್ರತೆಯ ಭೂಕಂಪ!
ಕಾಬುಲ್: ಅಫ್ಘಾನಿಸ್ತಾನದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಮತ್ತೆ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ತಿಳಿಸಿದೆ.
ಶನಿವಾರ ಸಂಭವಿಸಿದ ಭೂಕಂಪದಿಂದಾಗಿ ಅಫ್ಘಾನಿಸ್ತಾನದಲ್ಲಿ ಅಕ್ಷರಶಃ ನಲುಗಿ ಹೋಗಿದೆ. ಈಗಾಗಲೇ 4000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 20 ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣ ನಾಶವಾಗಿದೆ. ರಕ್ಷಣಾ ತಂಡ ಈಗಾಗಲೇ ಕಟ್ಟಡದ ಅವಶೇಷಗಳಡಿ ಸಿಲುಕಿರುವ ದೇಹಗಳನ್ನು ಪತ್ತೆಹಚ್ಚುವ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಬುಧವಾರ ಬೆಳ್ಳಂಬೆಳಗ್ಗೆ ವಾಯುವ್ಯ ಅಫ್ಘಾನಿಸ್ತಾನದಲ್ಲಿ ಮತ್ತೆ 6.3 ತೀವ್ರತೆಯ ಭೂಕಂಪ ಸಂಭವಿಸಿದೆ. 10 ಕಿಮೀ (6.21 ಮೈಲಿ) ಆಳದಲ್ಲಿ ಕಂಪನದ ಅನುಭವವಾಗಿದೆ ಎಂದು ಸಂಶೋಧನಾ ಕೇಂದ್ರ ವರದಿ ಮಾಡಿದೆ.
ಇದನ್ನೂ ಓದಿ: ಬರದಿಂದಾಗಿ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ! – ಬೇರೆ ರಾಜ್ಯದ ಮೊರೆ ಹೋಗಲಿದ್ಯಾ ಸರ್ಕಾರ
ಇದೀಗ ಸಂಭವಿಸಿದ ಭೂಕಂಪನದಲ್ಲಿ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎನ್ನಲಾಗಿದೆ. ಸರಣಿ ಭೂಕಂಪನದಿಂದ ಕಂಗಾಲಾಗಿರುವ ಅಲ್ಲಿನ ಜನ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗಿದೆ.