32 ಹಿರಿಯ ಜೀವಗಳಿಗೆ ಆಸರೆ ಕೊಟ್ಟ ದಂಪತಿಯ ದಾರುಣ ಸಾವು – ಜೀವನದಾರಿ ಆಶ್ರಮದಲ್ಲಿ ಉಳಿದಿರುವುದು ಬರೀ ಕಣ್ಣೀರು

32 ಹಿರಿಯ ಜೀವಗಳಿಗೆ ಆಸರೆ ಕೊಟ್ಟ ದಂಪತಿಯ ದಾರುಣ ಸಾವು – ಜೀವನದಾರಿ ಆಶ್ರಮದಲ್ಲಿ ಉಳಿದಿರುವುದು ಬರೀ ಕಣ್ಣೀರು

ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ. ಉಪಕಾರ ಮಾಡಿದರೆ ಪುಣ್ಯ ಬರುತ್ತೆ. ಹಿರಿಯ ಜೀವಗಳನ್ನು ಕಾಪಾಡಿದರೆ ದೇವರು ಕೈ ಹಿಡಿಯುತ್ತಾನೆ. ಹೀಗೆ ಈ ಎಲ್ಲಾ ಮಾತುಗಳು ನಿಜವಾಗಿಯೂ ಸತ್ಯವಾಗುತ್ತಾ. ಯಾಕೆಂದರೆ, ಆ ದಂಪತಿ 32 ಹಿರಿಯ ಜೀವಗಳಿಗೆ ಆಧಾರಸ್ತಂಭವಾಗಿದ್ದರು. ತಮ್ಮ ಬಳಿ ಹಣ ಇರಲಿ ಇಲ್ಲದೇ ಹೋಗಲಿ ಆಶ್ರಯ ನೀಡಿ ಮೂರು ಹೊತ್ತು ಊಟ ಹಾಕಿ ತನ್ನ ಕುಟುಂಬ ಸದಸ್ಯರು ಎಂದೇ ಭಾವಿಸಿ ಅವರಿಗಾಗಿಯೇ ಜೀವನ ಮುಡಿಪಾಗಿಟ್ಟಿದ್ದರು. ಈಗ ಆ ದಂಪತಿ ಕಂಡಿದ್ದು ದಾರುಣ ಮರಣ. ಅನಾಥರಾಗಿದ್ದ ವೃದ್ಧಜೀವಗಳಿಗೆ ಈಗ ಆಸರೆಯೂ ಇಲ್ಲ.. ಬದುಕಿನ ಮೇಲೆ ಭರವಸೆಯೂ ಇಲ್ಲ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಹರಿದ ಬಿಎಂಟಿಸಿ ಬಸ್ – ದೊಡ್ಡಮ್ಮನ ಕಣ್ಣೆದುರೇ ನಡೆದು ಹೋಯ್ತು ದುರಂತ ಘಟನೆ

ಮನೆ ಮಠ ಇಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದ 32 ಹಿರಿ ಜೀವಗಳಿಗೆ ಆಧಾರಸ್ತಂಭವಾಗಿದ್ದರು ರಮೇಶ್ ಮತ್ತು ರೂಪಾ ದಂಪತಿ. ಆದರೆ ಅಕ್ಟೋಬರ್ 4 ರ ರಾತ್ರಿ ನಡೆದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಪತಿ-ಪತ್ನಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ ರಮೇಶ್ ಸಾವನ್ನಪ್ಪಿದ್ದರು. ಇದಾದ ಬಳಿಕ ರಮೇಶ್ ಪತ್ನಿ ರೂಪ ಅವರು ಸೋಮವಾರ ರಾತ್ರಿ ಸುಮಾರು 11:30ರ ಸುಮಾರಿಗೆ ಸಾವನ್ನಪ್ಪಿದ್ದಾರೆ. ಇಬ್ಬರು ಒಟ್ಟಿಗೆ ಆಶ್ರಮ ಕೆಲಸ ಮಾಡಿಕೊಂಡು ಹಿರಿ ಜೀವಿಗಳಿಗೆ ಆಧಾರವಾಗಿದ್ದರು. ಆದರೆ, ಇಬ್ಬರೂ ಬಾರದ ಊರಿಗೆ ಪಯಣ ಬೆಳೆಸಿದ್ದಾರೆ.

ರಮೇಶ್ ಮತ್ತು ರೂಪಾ ದಂಪತಿಯನ್ನು ನಂಬಿಕೊಂಡು ಬದುಕಿನ ಬಂಡಿ ಸಾಗಿಸುತ್ತಿದ್ದ 32 ಹಿರಿಯ ಜೀವಗಳು ಈಗ ನಿಜಕ್ಕೂ ಅನಾಥರಾಗಿದ್ದಾರೆ. ನಮಗೆ ಇನ್ನೂ ಮುಂದೆ ಯಾರು ದಿಕ್ಕು  ಇಷ್ಟು ದಿನ ಸ್ವತಃ ತಂದೆ-ತಾಯಿಗಳಿಗೆ ಸೇವೆ ಮಾಡುವ ಹಾಗೆ ದಂಪತಿ ನಮಗೆ ತುತ್ತು ಅನ್ನವನ್ನು ನೀಡಿ ಸಾಕಿದ್ದಾರೆ. ಪ್ರತಿ ದಿನ ಪ್ರೀತಿಯಿಂದ ಮಾತಾನಾಡಿಸುತ್ತಾ ಇದ್ರು. ಔಷಧಿ ತೆಗೆದುಕೊಂಡಿಲ್ಲ ಅಂದ್ರು ಬೈದು ಔಷಧಗಳನ್ನು ನೀಡುತ್ತಿದ್ದರು. ಹೀಗೆ ಒಬ್ಬೊಬ್ಬರು ಕಣ್ಣಂಚಲ್ಲಿ ನೀರು ತುಂಬಿಕೊಂಡಿದೆ. ಹಿರಿಯ ಜೀವಗಳು ಸಂಕಟ ಪಡುತ್ತಿವೆ.

ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿ ರಮೇಶ್ ಮತ್ತು ಅವರ ಪತ್ನಿ ರೂಪಾ ಅವರು ಕಳೆದ 8 ವರ್ಷಗಳಿಂದ ವಿಕಾಸ್ ಜನಸೇವಾ ಟ್ರಸ್ಟ್ ಹೆಸರಿನ ಮೂಲಕ ಅನಾಥ ಆಶ್ರಮ ನಡೆಸುತ್ತಿದ್ದರು. ಸರ್ಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳ ಸಹಾಯ ಮತ್ತು ಸ್ವಂತ ದುಡಿಮೆಯಿಂದ ಬಂದ ಹಣದಲ್ಲಿ 32 ಅನಾಥ ವೃದ್ಧರನ್ನು ಸಾಕಿ ಸಲಹುತ್ತಿದ್ದರು.

ಜೀವನದಾರಿ ಆಶ್ರಮಕ್ಕೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಡಳಿತಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್ ಬೋಸರಾಜು ಸೂಚಿಸಿದ್ದಾರೆ. ಆಶ್ರಮ ನಡೆಸುವ ಮೂಲಕ ರಮೇಶ್ ಅವರ ಸಮಾಜಸೇವೆ ಶ್ಲಾಘನೀಯ. ಅವರ ಅಕಾಲಿಕ ಮರಣದಿಂದ ಆಶ್ರಮವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಸಚಿವ ಬೋಸರಾಜು ಹೇಳಿದ್ದಾರೆ.

Sulekha