ಬಿಗ್‌ಬಾಸ್ ಮನೆಯಲ್ಲಿ ಪ್ರದೀಪ್ ಈಶ್ವರ್ ಇದ್ದಿದ್ದು ಮೂರು ಗಂಟೆಗಳು ಮಾತ್ರ – ಇದರಲ್ಲಿ ವಿವಾದ ಮಾಡಲು ಏನಿದೆ ಎಂದು ಶಾಸಕರ ಪ್ರಶ್ನೆ

ಬಿಗ್‌ಬಾಸ್ ಮನೆಯಲ್ಲಿ ಪ್ರದೀಪ್ ಈಶ್ವರ್ ಇದ್ದಿದ್ದು ಮೂರು ಗಂಟೆಗಳು ಮಾತ್ರ – ಇದರಲ್ಲಿ ವಿವಾದ ಮಾಡಲು ಏನಿದೆ ಎಂದು ಶಾಸಕರ ಪ್ರಶ್ನೆ

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯಲ್ಲಿ ಎಷ್ಟು ದಿನ ಇದ್ದರು ಎಂಬ ಚರ್ಚೆ ಶುರುವಾಗಿತ್ತು. ಜೊತೆಗೆ ಒಬ್ಬ ಜನಪ್ರತಿನಿಧಿ, ಶಾಸಕರು ಮನರಂಜನೆ ಮಾಡಲು ಬಿಗ್‌ಬಾಸ್ ಮನೆಗೆ ಹೋಗಿದ್ದು ಸರಿಯಲ್ಲ ಎಂಬ ಚರ್ಚೆಯೂ ಶುರುವಾಗಿತ್ತು. ಇದೀಗ ಸ್ವತಃ ಶಾಸಕ ಪ್ರದೀಪ್ ಈಶ್ವರ್ ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:ಬಿಗ್‌ಬಾಸ್‌ ಮನೆಗೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ – ಎಂಎಲ್ಎ ದೊಡ್ಮನೆ ಪ್ರವೇಶಕ್ಕೆ ಕೇಳಿಬಂತು ಅಪಸ್ವರ..!

ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಶಾಸಕ ಪ್ರದೀಪ್ ಈಶ್ವರ್ ಎರಡು ಮೂರು ಗಂಟೆಗಳ ಕಾಲ ಇದ್ದರು. ಇದ್ದಷ್ಟು ಹೊತ್ತು ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಬದುಕಿನ ಪಾಠ ಹೇಳಿದರು. ಜೊತೆಗೆ ತಾನು ಕೂಡಾ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಇದರ ಜೊತೆಗೆ ಕೆಲವೊಂದು ಮಾತುಗಳು ಸ್ಪರ್ಧಿಗಳಿಗೆ ಇಷ್ಟವಾಗುವುದರ ಜೊತೆಗೆ ವೀಕ್ಷಕರಿಗೂ ಇಷ್ಟವಾಗಿದೆ. ‘ಲೈಫ್‌ನಲ್ಲಿ ಸೋಲೋಕೆ ರೆಡಿ ಇದ್ದರೆ, ಗ್ಯಾರೆಂಟಿ ಗೆಲ್ತೀರಾ. ‘ಒಳ್ಳೆಯವರು ದುಡ್ಡು ಮಾಡಿದರೆ ಒಳ್ಳೆಯದ್ದಕ್ಕೆ ಬಳಸುತ್ತಾರೆ. ಕೆಟ್ಟವರು ಮಾಡಿದರೆ ಕೆಟ್ಟದಕ್ಕೆ ಬಳಸುತ್ತಾರೆ. ಒಳ್ಳೆಯವರು ದುಡ್ಡು ಮಾಡದೇ ಇರೋದು ಸಮಾಜಘಾತುಕನೇ’ ಎಂದು ಶಾಸಕರು ಹೇಳಿದರು.  ‘ನಾನು ಎಲೆಕ್ಷನ್‌ಗೆ ನಿಂತರೆ ‘ನಿನಗೆ ಬೇಕಾಗಿತ್ತಾ’ ಅಂದರು. ಶಾಲೆಯಲ್ಲಿ ಶಿಕ್ಷಕರು ‘ಭಾಗವಹಿಸುವುದು ಮುಖ್ಯ’ ಅಂತಿದ್ರು. ‘ಸೋಲು, ಗೆಲುವು ಸೆಕೆಂಡರಿ’ ಅಂದ್ರು. ಟೀಚರ್ ಹೇಳಿರುವ ಸಿಂಪಲ್ ಫಾರ್ಮುಲಾನ ನಾನು ಅಪ್ಲೈ ಮಾಡಿದೆ. ನಾನು ಗೆದ್ದೆ. ಜೀವನದಲ್ಲಿ ನಂಬಿಕೆ ಇರಬೇಕು’ ಎಂದು ಪ್ರದೀಪ್ ಈಶ್ವರ್ ಹೇಳಿದರು.

ಕೆಲವೇ ಗಂಟೆಗಳ ಸಮಯ ಇದ್ದು ನಂತರ ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯಿಂದ ವಾಪಾಸಾದ್ರು. ಬಿಗ್‌ಬಾಸ್ ಮನೆಯಿಂದ ಬಂದ ಮೇಲೆ ಪ್ರದೀಪ್ ಈಶ್ವರ್ ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ವಾಹಿನಿ ಮತ್ತು ತಮ್ಮ ಮಧ್ಯ ಒಪ್ಪಂದ ಆಗಿದ್ದು ಹಲವು ಗಂಟೆಗಳು ಮಾತ್ರ. ನಾನು ಬಿಗ್ ಬಾಸ್ ಮನೆಯಲ್ಲಿ ಇದ್ದದ್ದೇ ಎರಡ್ಮೂರು ಗಂಟೆಗಳು ಮಾತ್ರ. ವಾಹಿನಿಗಳ ಕಾರ್ಯಕ್ರಮಗಳಲ್ಲಿ ಭಾಗಿ ಆಗುವುದು ತಪ್ಪೇನೂ ಇಲ್ಲ. ಅಲ್ಲಿನ ಸ್ಪರ್ಧಿಗಳಿಗೆ ಉತ್ತೇಜಿಸಲು ಹೋಗಿದ್ದೆ. ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದೇನೆ. ಇದನ್ನು ಯಾಕೆ ವಿವಾದ ಮಾಡಲಾಗುತ್ತಿದೆ ಗೊತ್ತಿಲ್ಲ. ನೂರು ದಿನ ಹೋಗಿದ್ದರೆ ಮಾತನಾಡಬಹುದಿತ್ತು. ಹೋಗಿದ್ದೆ ಮೂರು ತಾಸು ಎಂದು ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಹೋಗಿದ್ದನ್ನು ಸಮರ್ಥಿಸಿಕೊಂಡರು.

Sulekha