ಮೈಸೂರು ಪೊಲೀಸ್ ಶ್ವಾನದಳದ ಲೈಕಾ ಇನ್ನು ನೆನಪು ಮಾತ್ರ..!
ಪೊಲೀಸ್ ಇಲಾಖೆಯ ಬಲ ಶ್ವಾನದಳವೂ ಹೌದು. ಪೊಲೀಸರ ಹೆಗಲಿಗೆ ಹೆಗಲು ಕೊಟ್ಟು ಸಮಾಜದಲ್ಲಿ ಅಪರಾಧ ಚಟುವಟಿಕೆಗೆಳನ್ನು ಪತ್ತೆ ಹಚ್ಚುವ ಅಪರಾಧಿಗಳನ್ನು ಹೆಡೆಮುರಿ ಕಟ್ಟಲು ಮಹತ್ವದ ಪಾತ್ರ ವಹಿಸುವಲ್ಲಿ ಶ್ವಾನದಳ ತನ್ನದೇ ಆದ ಮಹತ್ವವನ್ನು ಹೊಂದಿದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಸ್ಪೋಟಕ ಪತ್ತೆಗೆ, ಮಾದಕದ್ರವ್ಯ ಪತ್ತೆಗೆ, ಅಪರಾಧ ಪತ್ತೆಗೆ ಶ್ವಾನಗಳನ್ನು ಬಳಸಿಕೊಳ್ಳಲಾಗುತ್ತದೆ. ಇನ್ನು ಲ್ಯಾಬ್, ಜರ್ಮನ್ ಶೆಫರ್ಡ್, ಡಾಬರ್ ಮ್ಯಾನ್ ಜಾತಿಯ ನಾಯಿಗಳಿಗೆ ತರಬೇತಿ ನೀಡಿ ಶ್ವಾನದಳದಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಈ ಶ್ವಾನದಳದಲ್ಲಿರುವ ಲೈಕಾ ಎಂಬ ಶ್ವಾನ ಈಗ ಬರೀ ನೆನಪು ಮಾತ್ರ.
ಇದನ್ನೂ ಓದಿ: ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್! – ನ. 7 ರಿಂದ ಮತದಾನ, ಡಿ. 3 ಕ್ಕೆ ಫಲಿತಾಂಶ
ಲ್ಯಾಬ್ ತಳಿಯ ಲೈಕಾ ಶ್ವಾನಕ್ಕೆ ಮಾತೊಂದು ಬರುತ್ತಿರಲಿಲ್ಲ ಅಷ್ಟೇ. ಅದನ್ನು ಹೊರತುಪಡಿಸಿದರೆ ಲೈಕಾ ಒಬ್ಬ ಯೋಧನಿಗೆ ಸರಿ ಸಮವಾಗಿತ್ತು. ಲೈಕಾ ಮೈಸೂರು ಜಿಲ್ಲಾ ಪೊಲೀಸ್‌ನ ಶ್ವಾನದದಳದ ಹಿರಿಯ ಸದಸ್ಯ. ಸದ್ಯ ಲೈಕಾ ಶ್ವಾನ ನೆನಪು ಮಾತ್ರ. 9 ವರೆ ವರ್ಷದ ಲೈಕಾ ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದೆ. ಮೂರು ತಿಂಗಳ ಮರಿಯಾಗಿದ್ದಾಗ ಇದನ್ನು ಪೊಲೀಸ್ ಇಲಾಖೆಗೆ ತರಲಾಗಿತ್ತು. 9 ತಿಂಗಳ ತರಬೇತಿ ನಂತರ ಲೈಕಾ ಇಲಾಖಾ ಕೆಲಸಕ್ಕೆ ತೊಡಗಿಸಿಕೊಂಡಿತ್ತು. ಪೊಲೀಸ್ ಇಲಾಖೆಗೆ ಸೇರಿ ಭರ್ತಿ 8 ವರ್ಷ ಸುದೀರ್ಘ ಸೇವೆ ಸಲ್ಲಿಸಿ ಲೈಕಾ ಹುತಾತ್ಮರ ಪಟ್ಟಿ ಸೇರಿದೆ.
ಲೈಕಾ ಮೈಸೂರು ಜಿಲ್ಲಾ ಪೊಲೀಸ್ ತಂಡದಲ್ಲಿ ಸ್ಪೋಟಕ ಪತ್ತೆ ದಳದ ಸಕ್ರಿಯವಾಗಿದ್ದ ಶ್ವಾನ. 2014ರಲ್ಲಿ ಜನಿಸಿದ ಲೈಕಾ 2014 ರಲ್ಲೇ ಪೊಲೀಸ್ ಇಲಾಖೆ ಸೇರಿತು. ಲೈಕಾಗೆ ಸ್ಪೋಟಕ ಪತ್ತೆ ಬಗ್ಗೆ ತರಬೇತಿ ನೀಡಲಾಯಿತು. ಲೈಕಾ ಎಷ್ಟರಮಟ್ಟಿಗೆ ಅದರಲ್ಲಿ ಪರಿಣಿತಿ ಹೊಂದಿತ್ತು ಎಂದರೆ ಪೊಲೀಸ್ ಇಲಾಖೆ ಸೇರಿದ ಮೊದಲ ವರ್ಷವೇ ಸ್ಪೋಟಕ ಪತ್ತೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿತು. ಇದಾದ ನಂತರ ಲೈಕಾ ತಿರುಗಿ ನೋಡಲೇ ಇಲ್ಲ. ರಾಷ್ಟ್ರಪತಿಗಳ ಕಾರ್ಯಕ್ರಮ, ಪ್ರಧಾನಿಗಳ ಕಾರ್ಯಕ್ರಮ ಕೇಂದ್ರ ಸಚಿವರ ಕಾರ್ಯಕ್ರಮ ಸಿಎಂ ಕಾರ್ಯಕ್ರಮ ಸಚಿವರ ಕಾರ್ಯಕ್ರಮ, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳೇ ಅಗಲಿ ಅಲ್ಲಿ ಲೈಕ್ ಕೆಲಸಕ್ಕೆ ಹಾಜರಾಗುತಿತ್ತು. ಸಣ್ಣ ಗೊಂದಲಕ್ಕೂ ಆಸ್ಪದ ಕೊಡದೇ ತನ್ನ ಕರ್ತವ್ಯ ನಿರ್ವಹಿಸುತ್ತಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 275 ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸಿದ್ದ ಕೀರ್ತಿ ಲೈಕಾದು. ಇಲಾಖೆಗೆ ದುಡಿದು ಹುತಾತ್ಮನಾದ ಲೈಕಾಗೆ ಸಕಲ ಸರ್ಕಾರಿ ಗೌರವಗಳನ್ನು ನೀಡಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೈಸೂರು ಜಿಲ್ಲಾ ಪೊಲೀಸ್ ಡಾಗ್ ಕೆನಲ್ ಆವರಣದಲ್ಲಿ ಅಂತ್ಯಕ್ರಿಯೆ ಮಾಡಲಾಯ್ತು. ಈ ವೇಳೆ ಲೈಕಾಗೆ ಗನ್ ಸೆಲ್ಯೂಟ್ ನೀಡಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಿಸಲಾಯ್ತು. ಖುದ್ದು ಮೈಸೂರು ಜಿಲ್ಲಾ ಎಸ್ ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ ಪಿ ನಂದಿನಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.