ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಅ.17ರಿಂದ ತುಲಾಮಾಸ ಪೂಜೆ ಆರಂಭ

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಅ.17ರಿಂದ ತುಲಾಮಾಸ ಪೂಜೆ ಆರಂಭ

ಕಾಸರಗೋಡು: ಕೇರಳ ರಾಜ್ಯದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನವು ವಿಶ್ವ ವಿಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿದೆ. ಶಬರಿಮಲೆ ಎಂದೊಡನೆ ಎಲ್ಲರಿಗೂ ಅಯ್ಯಪ್ಪ ಸ್ವಾಮಿಯ ಹೆಸರು ತಟ್ಟನೆ ಮನಸ್ಸಿಗೆ ಬರುತ್ತದೆ. ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಈ ಪವಿತ್ರ ಯಾತ್ರಾ ಸ್ಥಳಕ್ಕೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾರೆ. ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ತುಲಾಮಾಸದ ಪೂಜೆಗೆ ಇದೀಗ ದಿನಾಂಕ ನಿಗದಿಯಾಗಿದೆ.

ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ತುಲಾಮಾಸದ ಪೂಜೆಗಾಗಿ ಅ.17ರಂದು ಸಂಜೆ 5ಕ್ಕೆ ಗರ್ಭಗುಡಿ ಬಾಗಿಲು ತೆರೆಯಲಿದೆ. 18ರಂದು ಬೆಳಗ್ಗಿನಿಂದ ಅಭಿಷೇಕ ಆರಂಭವಾಗಲಿದೆ. ಐದು ದಿವಸಗಳ ತುಲಾಮಾಸದ ಪೂಜೆಯ ನಂತರ 22ರಂದು ರಾತ್ರಿ 10ಕ್ಕೆ ಹರಿವರಾಸನಂ ಹಾಡಿನೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಟನ್ ಗಟ್ಟಲೆ ಚಿನ್ನ, 960 ಸ್ವತ್ತು.. ₹85,705 ಕೋಟಿ ಆಸ್ತಿ ಮೌಲ್ಯ – ವಿಶ್ವಕ್ಕೇ ಕುಬೇರ ತಿರುಪತಿ ತಿಮ್ಮಪ್ಪ

ತುಲಾಮಾಸದ ಪೂಜೆ ಸಂದರ್ಭದಲ್ಲಿಯೇ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮತ್ತು ಮಾಳಿಗಪುರತ್ತಮ್ಮ ದೇವಸ್ಥಾನಕ್ಕೆ 2023-24ನೇ ಸಾಲಿಗೆ ನೂತನ ಅರ್ಚಕರ ನೇಮಕವಾಗಲಿದೆ. 18ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಎರಡೂ ಕ್ಷೇತ್ರಗಳ ಪ್ರಧಾನ ಅರ್ಚಕರ ಹುದ್ದೆಗೆ ತಲಾ 17ಮಂದಿಯ ಹೆಸರನ್ನು ಅಂತಿಮಗೊಳಿಸಲಾಗಿದ್ದು, ಚೀಟಿ ಎತ್ತುವ ಮೂಲಕ ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನ ಹಾಗೂ ಮಾಳಿಗಪುರತ್ತಮ್ಮ ದೇವಾಲಯದ ಮುಖ್ಯ ಅರ್ಚಕರನ್ನು ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

Shwetha M