ಚಾರಣ ಪ್ರಿಯರಿಗೆ ಗುಡ್ ನ್ಯೂಸ್! – ಕುಮಾರಪರ್ವತ ಚಾರಣಕ್ಕೆ ಮತ್ತೆ ಇಂದಿನಿಂದ ಅವಕಾಶ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರಪರ್ವತ ಚಾರಣಕ್ಕೆ ಭಾರಿ ಮಳೆಯ ಹಿನ್ನೆಲೆ ನಿರ್ಬಂಧಿಸಲಾಗಿತ್ತು. ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಇಂದಿನಿಂದ (ಅ. 7ರ) ಮತ್ತೆ ಚಾರಣ ಆರಂಭಗೊಂಡಿದೆ.
ಚಾರಣ ಆರಂಭವಾದ ಮೂರು ದಿನಗಳಲ್ಲಿ ಕುಮಾರಪರ್ವತ ಭಾಗಳಲ್ಲಿ ಭಾರಿ ಮಳೆ ಸುರಿಯುತ್ತಿತ್ತು. ಭಾರೀ ಮಳೆಯ ಕಾರಣ ಚಾರಣಿಗರ ಹಿತದೃಷ್ಟಿಯಿಂದ ಕುಮಾರಪರ್ವತ ಚಾರಣವನ್ನು ಅ. 3ರಿಂದ ನಿಷೇಧಿಸಲಾಗಿತ್ತು. ಇದೀಗ ಇದೀಗ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಚಾರಣಕ್ಕೆ ಅವಕಾಶ ಒದಗಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅದಕ್ಕಿಂತ ಮೊದಲು ಮೇ ತಿಂಗಳಿನಿಂದ ಸೆ.29ರ ತನಕ ಅರಣ್ಯ ಇಲಾಖೆಯು ಬಿರು ಬೇಸಗೆ ಮತ್ತು ಅಧಿಕ ಮಳೆಯ ಕಾರಣದಿಂದಾಗಿ ನಿರ್ಬಂಧ ವಿಧಿಸಿತ್ತು. ಆ ಬಳಿಕ ಸೆ. 30ರಿಂದ ನಿರ್ಬಂಧ ತೆರವುಗೊಳಿಸಿ ಚಾರಣಕ್ಕೆ ಅವಕಾಶ ನೀಡಿತ್ತು.
ಇದನ್ನೂ ಓದಿ: ಈ ಬಾರಿ ಪರಿಸರ ಸ್ನೇಹಿ ದಸರಾ – ಪ್ಲಾಸ್ಟಿಕ್ ಬಳಸಿದ್ರೆ ಬೀಳುತ್ತೆ ಭಾರಿ ದಂಡ!
ಕುಮಾರಪರ್ವತ ಚಾರಣ ಮತ್ತೆ ಆರಂಭಗೊಳ್ಳಲಿರುವುದರಿಂದ ಪರ್ವತದ ದಾರಿಯಲ್ಲಿ ಮತ್ತು ಪರ್ವತದಲ್ಲಿ ಸ್ವಚ್ಛತೆ ಕಾಪಾಡಲು ವಿಶೇಷ ವ್ಯವಸ್ಥೆಯನ್ನು ಇಲಾಖೆ ಮಾಡಿದೆ. ಕುಮಾರಪರ್ವತ, ಗಿರಿಗದ್ದೆ, ಕಲ್ಲಚಪ್ಪರ ಸೇರಿದಂತೆ ಪರ್ವತಾರೋಹಣದ ಹಾದಿಯಲ್ಲಿಸ್ವಚ್ಛತೆ ಕಾಪಾಡಲು ಬೇಕಾದ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸೂಚನಾ ಫಲಕವನ್ನು ಅಲ್ಲಲ್ಲಿ ಅಳವಡಿಸಿ ಜಾಗೃತಿ ಮಾಡಿಸುವ ಕಾರ್ಯ ಮಾಡಲಾಗಿದೆ. ಪ್ಲಾಸ್ಟಿಕ್ ಬಾಟಲಿ, ಕವರ್, ವಸ್ತುಗಳನ್ನು ಕೊಂಡೊಯ್ಯದಂತೆ ನಿರ್ಬಂಧ ವಿಧಿಸಲಾಗಿದೆ. ಅಲ್ಲಲ್ಲಿ ಕಸದ ತೊಟ್ಟಿಗಳ ವ್ಯವಸ್ಥೆಯನ್ನು ಇಲಾಖೆ ಕಲ್ಪಿಸಿದೆ.