ಪುತ್ರನಿಂದ ಬೇರೆಯಾಗಿ ವರ್ಷಗಟ್ಟಲೆ ಒಂಟಿಯಾಗಿ ಬದುಕುವಂತೆ ಮಾನಸಿಕ ಹಿಂಸೆ – ಪತ್ನಿಗೆ ಡಿವೋರ್ಸ್ ನೀಡಿದ ಕ್ರಿಕೆಟಿಗ ಶಿಖರ್ ಧವನ್

ಪುತ್ರನಿಂದ ಬೇರೆಯಾಗಿ ವರ್ಷಗಟ್ಟಲೆ ಒಂಟಿಯಾಗಿ ಬದುಕುವಂತೆ ಮಾನಸಿಕ ಹಿಂಸೆ – ಪತ್ನಿಗೆ ಡಿವೋರ್ಸ್ ನೀಡಿದ ಕ್ರಿಕೆಟಿಗ ಶಿಖರ್ ಧವನ್

ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಶಿಖರ್ ಧವನ್ ಹಾಗೂ ಪತ್ನಿ ಆಯೇಷಾ ಮುಖರ್ಜಿ ನಡುವಿನ ವೈವಾಹಿಕ ಜೀವನ ಅಧಿಕೃತವಾಗಿ ಅಂತ್ಯವಾಗಿದೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟ್  ಬುಧವಾರ ಶಿಖರ್ ಮತ್ತು ಆಯೇಷಾ ವಿಚ್ಛೇದನವನ್ನು ಅನುಮೋದಿಸಿದೆ. 2012ರಲ್ಲಿ ಇಬ್ಬರೂ ಮದುವೆಯಾಗಿದ್ದರು. ಇಬ್ಬರಿಗೂ ಜೋರಾವರ್ ಎಂಬ ಮಗನಿದ್ದಾನೆ. ಆಯೇಷಾ ಶಿಖರ್‌ಗಿಂತ 10 ವರ್ಷ ದೊಡ್ಡವಳು. ಇದು ಆಯೇಷಾಳ ಎರಡನೇ ವಿವಾಹವಾಗಿತ್ತು. ತನ್ನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಬೇರ್ಪಟ್ಟು ಬದುಕುವಂತೆ ಒತ್ತಾಯಿಸಿ ಶಿಖರ್‌ಗೆ ಪತ್ನಿ ಮಾನಸಿಕ ನೋವು ಉಂಟು ಮಾಡಿದ್ದಾಳೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ : ಪಾಕಿಸ್ತಾನ ಮತ್ತು ಫೀಲ್ಡಿಂಗ್ ಎಂದಿಗೂ ಮುಗಿಯದ ಪ್ರೇಮಕಥೆ – ಶಿಖರ್ ಧವನ್ ಹೀಗೆ ಹೇಳಿದ್ಯಾಕೆ?

ದಂಪತಿಯ ವಿಚ್ಛೇದನ ಪ್ರಕರಣವನ್ನು ದೆಹಲಿಯ ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿದ್ದು ನ್ಯಾಯಾಧೀಶ ಹರೀಶ್ ಕುಮಾರ್ ಅವರು ಧವನ್​ ತಮ್ಮ ಹೆಂಡತಿಯ ವಿರುದ್ಧದ ವಿಚ್ಛೇದನ ಅರ್ಜಿಯಲ್ಲಿ ಮಾಡಿದ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಶಿಖರ್ ಧವನ್ ಪತ್ನಿ ಈ ಆರೋಪಗಳನ್ನು ಪ್ರಶ್ನಿಸದೆ ತನ್ನನ್ನು ಸಮರ್ಥನೆ ಮಾಡಿಕೊಳ್ಳಲು ವಿಫಲರಾಗಿರುವ ಕಾರಣ ನ್ಯಾಯಾಲಯ ಧವನ್ ಮನವಿಯನ್ನು ಪುಸ್ಕರಿಸಿದೆ.

ಪುತ್ರನಿಂದ ಬೇರೆಯಾಗಿ ವರ್ಷಗಟ್ಟಲೆ ಬದುಕುವಂತೆ ಒತ್ತಾಯಿಸಿ ಪತ್ನಿ ಮಾನಸಿಕ ಹಿಂಸೆ ಕೊಟ್ಟಿದ್ದಾರೆ ಎಂದು ಶಿಖರ್ ಆರೋಪಿಸಿದ್ದರು. ಈ ಆರೋಪಗಳನ್ನು ಆಯೇಷಾ ಸಮರ್ಥನೆ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ. ವಿಚ್ಛೇದನ ಅರ್ಜಿಯಲ್ಲಿ ಪತ್ನಿ ವಿರುದ್ಧ ಧವನ್ ಮಾಡಿರುವ ಎಲ್ಲಾ ಆರೋಪಗಳನ್ನು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಹರೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಮಗನ ಖಾಯಂ ಕಸ್ಟಡಿಗೆ ಸಂಬಂಧಿಸಿದಂತೆ ಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಆದರೆ ಧವನ್‍ಗೆ ತನ್ನ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೋ ಕರೆ ಮೂಲಕ ಮಾತನಾಡುವ ಹಕ್ಕನ್ನು ಕೋರ್ಟ್ ನೀಡಿದೆ. ಪ್ರಸ್ತುತ ಆಯೇಷಾ ಅವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡರ ಪೌರತ್ವವನ್ನು ಅವರು ಹೊಂದಿದ್ದಾರೆ.

Shantha Kumari