ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದುವರಿದ ರೋಗಿಗಳ ಸಾವು! – ಮೃತರ ಸಂಖ್ಯೆ 59ಕ್ಕೆ ಏರಿಕೆ
ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಮರಣ ಮೃದಂಗ ಮುಂದುವರಿದಿದೆ, ಕಳೆದ 48 ಗಂಟೆಗಳಲ್ಲಿ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 59 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
59 ರೋಗಿಗಳ ಸಾವಿಗೆ ಔಷಧಿ ಮತ್ತು ಸಿಬ್ಬಂದಿ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಈ ನಾಂದೇಡ್ನ ಶಂಕರರಾವ್ ಚವಾನ್ ಆಸ್ಪತ್ರೆ ಹಾಗೂ ಔರಂಗಾಬಾದ್ನ ಘಾಟಿ ಆಸ್ಪತ್ರೆಗೆ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಹಲವು ಖಾಯಿಲೆಯಿಂದ ಬಳಲುತ್ತಿದ್ದ ರೋಗಿಗಳು ದಾಖಲಾಗಿದ್ದರು. ಕಳೆದ 48 ಗಂಟೆಗಳಲ್ಲಿ ನಾಂದೇಡ್ನ ಶಂಕರರಾವ್ ಚವಾನ್ ಆಸ್ಪತ್ರೆಯಲ್ಲಿ 35 ಮಂದಿ ಸಾವನ್ನಪ್ಪಿದ್ದರೆ, ಔರಂಗಾಬಾದ್ನ ಘಾಟಿ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸಿಕ್ಕಿಂನಲ್ಲಿ ಮೇಘಸ್ಫೋಟ -ಕೊಚ್ಚಿ ಹೋದ ಸೇತುವೆ, 23 ಸೇನಾ ಸಿಬ್ಬಂದಿ ನಾಪತ್ತೆ
ನಾಂದೇಡ್ ಮತ್ತು ಘಾಟಿ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇನ್ನು ನಾಂದೇಡ್ ಮತ್ತು ಘಾಟಿಯಲ್ಲಿ ಔಷಧಿ ಕೊರತೆ ಹಾಗೂ ವೈದ್ಯರ ಅಲಭ್ಯತೆಯಿಂದ ಸಾವು ಸಂಭವಿಸಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಶಿಂಧೆ ಅಲ್ಲಗಳೆದಿದ್ದಾರೆ.
ತನಿಖಾ ಸಮಿತಿಯ ವರದಿ ನಂತರ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ನಾವು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಔರಂಗಾಬಾದ್ನ ನಾಂದೇಡ್ ಮತ್ತು ಘಾಟಿಯಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ಸಚಿವರು, ಕಾರ್ಯದರ್ಶಿ ಮತ್ತು ಅಧಿಕಾರಿಗಳ ತಂಡವನ್ನು ಕಳುಹಿಸಿದ್ದೇವೆ ಎಂದು ಶಿಂಧೆ ಹೇಳಿದ್ದಾರೆ.
ಇನ್ನು ನಾಂದೇಡ್ ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು, 16 ಶಿಶುಗಳು ಸೇರಿದಂತೆ 35 ಜನರ ಸಾವಿಗೆ ಔಷಧಿಗಳ ಕೊರತೆ ಮತ್ತು ವೈದ್ಯಕೀಯ ಸಿಬ್ಬಂದಿಯ ಅಲಭ್ಯತೆ ಕಾರಣ ಎಂದು ಆರೋಪಿಸಿದ್ದಾರೆ. 70 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಅಜ್ಞಾತ ಕಾರಣಗಳಿಂದ ಔಷಧಿ ಪೂರೈ ಕೆ ಮತ್ತು ವೈದ್ಯರ ನೇಮಕಾತಿ ಸ್ಥಗಿತಗೊಂಡಿದೆ. ಹಲವಾರು ಜನರ ಪ್ರಾಣವನ್ನು ಕಳೆದುಕೊಂಡಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ರಾಜ್ಯ ಸರ್ಕಾರ ಜವಾಬ್ದಾರಿಯನ್ನು ನಿಗದಿ ಪಡಿಸಿ ವ್ಯವಸ್ಥೆ ಸುಧಾರಿಸಬೇಕು ಎಂದರು.
ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಔಷಧಿಗಳ ಖರೀದಿಗೆ 40% ಕಮಿಷನ್ ಬೇಡಿಕೆಯಿರುವುದರಿಂದ ಔಷಧಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಆರೋಪಿಸಿದರು. ಇನ್ನು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ನಡೆಸುವ ಸಿವಿಕ್ ಆಸ್ಪತ್ರೆಯಲ್ಲಿ ಈ ಹಿಂದೆ 17 ಜನರು ಸಾವನ್ನಪ್ಪಿದ್ದರು. ಆದರೆ ಅಂತಹ ದುರಂತಗಳಿಂದ ಇದುವರೆಗೆ ಸರ್ಕಾರ ಯಾವುದೇ ಪಾಠ ಕಲಿತಿಲ್ಲ ಎಂದು ಅವರು ಹೇಳಿದರು.