ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ – ನಿದ್ದೆಯಲ್ಲಿದ್ದ ಉದ್ಯಮಿಗಳಿಗೆ ಶಾಕ್!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಉದ್ಯಮಿಗಳಿಗೆ ಬೆಳ್ಳಂಬೆಳ್ಳಗ್ಗೆ ಐಟಿ ಶಾಕ್ ನೀಡಿದೆ. ನಗರದ 10ಕ್ಕೂ ಹೆಚ್ಚು ಕಡೆ ಬುಧವಾರ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ 10 ಕಡೆಗಳಲ್ಲಿ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚರಾಸ್ತಿ ಹಾಗೂ ಸ್ಥಿರಾಸ್ತಿ ವರಮಾನದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: 34 ದಿನಗಳ ಬಳಿಕ ಕೆಆರ್ಎಸ್ ಡ್ಯಾಂನಲ್ಲಿ ನೀರಿನ ಮಟ್ಟ ಹೆಚ್ಚಳ -100 ಅಡಿಯ ಗಡಿ ದಾಟಿದ ನೀರಿನ ಮಟ್ಟ
15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡಗಳು ರಾತ್ರೋರಾತ್ರಿ ಚೆನ್ನೈ, ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು, ಬುಧವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿವೆ. ಒಂದೊಂದು ತಂಡದಲ್ಲಿ 5 ರಿಂದ 6 ಮಂದಿ ಅಧಿಕಾರಿಗಳಿದ್ದಾರೆ. ವಿಜಯನಗರ, ಬಿಟಿಎಂ ಲೇಔಟ್ , ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ತೆರಿಗೆ ವಂಚನೆ ಆರೋಪದಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕಾವೇರಿ ಥಿಯೇಟರ್ ಬಳಿಯಿರುವ ಚಿನ್ನದ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.