ಗೂಗಲ್ ಮ್ಯಾಪ್ ಬಳಕೆದಾರರಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಪೊಲೀಸ್ ಇಲಾಖೆ!
ಕೊಚ್ಚಿ: ಗೂಗಲ್ ಮ್ಯಾಪ್ ಎಡವಟ್ಟಿನಿಂದಾಗಿ ಕೇರಳದಲ್ಲಿ ಇಬ್ಬರು ವೈದ್ಯರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಗೂಗಲ್ ಮ್ಯಾಪ್ ನದಿಯನ್ನು ರಸ್ತೆ ಎಂದು ತೋರಿಸಿದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯಿಂದ ಎಚ್ಚೆತ್ತುಕೊಂಡ ಕೇರಳ ಪೊಲೀಸ್ ಇಲಾಖೆ ಗೂಗಲ್ ಮ್ಯಾಪ್ ಬಳಕದಾರರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಕೇರಳ ಪೊಲೀಸ್ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಗೂಗಲ್ ಮ್ಯಾಪ್ ಬಳಕದಾರರಿಗೆ ಕೆಲವೊಂದು ಸಲಹೆ ನೀಡಲಾಗಿದೆ. ಈ ಮಾರ್ಗಸೂಚಿಯನ್ನು ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಾನ್ಸೂನ್ ಅವಧಿಯಲ್ಲಿ ಅಪರಿಚಿತ ದಾರಿಯಲ್ಲಿ ಪ್ರಯಾಣಿಸಬೇಡಿ ಎಂದು ಹೇಳಿದ್ದಾರೆ. ಅಲ್ಲದೆ ಗೂಗಲ್ ಮ್ಯಾಪ್ನಲ್ಲಿ ಏನು ಮಾಡಬೇಕು ಏನು ಮಾಡಬಾರದು ಎನ್ನುವುದನ್ನು ಪಟ್ಟಿ ಮಾಡಿದ್ದಾರೆ.
ಇದನ್ನೂ ಓದಿ: ರಸ್ತೆಯೆಂದು ನದಿಯನ್ನು ತೋರಿಸಿದ ಜಿಪಿಎಸ್ ಮ್ಯಾಪ್ – ಕಾರು ಮುಳುಗಿ ಇಬ್ಬರು ವೈದ್ಯರ ದಾರುಣ ಅಂತ್ಯ
ಮಳೆಯ ಸಮಯದಲ್ಲಿ ಆಗಾಗ್ಗೆ ರಸ್ತೆಗಳನ್ನು ಬದಲಿಸಲಾಗುತ್ತದೆ. ಆದರೆ ಗೂಗಲ್ ಮ್ಯಾಪ್ನಲ್ಲಿ ಪರ್ಯಾಯ ರಸ್ತೆಯ ಬಗ್ಗೆ ಮಾಹಿತಿ ಇರುವುದಿಲ್ಲ. ಗೂಗಲ್ ಮ್ಯಾಪ್ ನೋಡಿ ಅಪರಿಚಿತ ದಾರಿಯಲ್ಲಿ ಸಾಗುವುದು ಅಪಾಯಕಾರಿ. ಕಡಿಮೆ ಟ್ರಾಫಿಕ್ ಇರುವ ರಸ್ತೆಯನ್ನು ಗೂಗಲ್ ಮ್ಯಾಪ್ ತೋರಿಸಬಹುದು. ಅದರೆ ಅವುಗಳು ಸುರಕ್ಷಿತವಲ್ಲ. ತೊರೆಗಳು ಉಬ್ಬಿ ಹರಿಯುವ, ಭೂಕುಸಿತ ಉಂಟಾಗಿರುವ, ಮರಗಳು ಬಿದ್ದಿರುವ, ಕಡಿದಾದ ಹಾಗೂ ಅಪಾಯಕಾರಿ ರಸ್ತೆಗಳನ್ನು ಬಳಸಲು ಗೂಗಲ್ ಮ್ಯಾಪ್ ತೋರಿಸಬಹುದು. ದಾರಿ ಮಧ್ಯೆ ಜಿಪಿಎಸ್ ಕೈಕೊಡುವ ಸಾಧ್ಯತೆ ಇರುವುದರಿಂದ ಮೊದಲೇ ರೂಟ್ ಮ್ಯಾಪ್ ಸೇವ್ ಮಾಡಿಟ್ಟುಕೊಳ್ಳಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
‘ಯಾವ ವಾಹನದಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಗೂಗಲ್ ಮ್ಯಾಪ್ನಲ್ಲಿ ಆಯ್ಕೆ ಮಾಡಿ, ನಾಲ್ಕು ಚಕ್ರದ ವಾಹನ, ದ್ವಿಚಕ್ರ, ನಡಿಗೆ ಹಾಗೂ ರೈಲಿನ ಆಯ್ಕೆ ಇದೆ. ಇವುಗಳಲ್ಲಿ ಸರಿಯಾಗಿದ್ದನ್ನೇ ಆಯ್ಕೆ ಮಾಡಬೇಕು. ರಸ್ತೆ ತಡೆ, ಟ್ರಾಫಿಕ್ ಜಾಮ್ ಬಗ್ಗೆ ಇತರರಿಗೆ ಮಾಹಿತಿ ನೀಡಲು ಗೂಗಲ್ ಮ್ಯಾಪ್ನಲ್ಲಿರುವ ‘Contribute’ ಆಯ್ಕೆಯನ್ನು ಬಳಸಿ ಎಂದು ಪೊಲೀಸರು ಮಾರ್ಗಸೂಚಿಯಲ್ಲಿ ಸಲಹೆ ನೀಡಿದ್ದಾರೆ.