ನೇಪಾಳದ ಭೂಕಂಪನದ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಕಂಪಿಸಿದ ಭೂಮಿ! – 4.6 ರ ತೀವ್ರತೆ ದಾಖಲು!
ನವದೆಹಲಿ: ನೇಪಾಳದಲ್ಲಿ 6.2ರ ತೀವ್ರತೆಯ ಭೂಕಂಪನ ದಾಖಲಾದ ಬೆನ್ನಲ್ಲೇ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭೂಕಂಪವವಾಗಿದೆ. ರಿಕ್ಟರ್ ಮಾಪಕದಲ್ಲಿ 4.6ರ ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ 2.25ಕ್ಕೆ ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನ ಅನುಭವವಾಗುತ್ತಿದ್ದಂತೆ ಮನೆ, ಕಚೇರಿ, ಕಟ್ಟದಲ್ಲಿದ್ದ ಜನರು ಹೊರಗೆ ಓಡಿದ್ದಾರೆ. ದೆಹಲಿಯಲ್ಲಿ ಸಂಭವಿಸಿದ ಲಘು ಭೂಕಂಪನದಲ್ಲಿ ಅನಾಹುತಗಳ ಕುರಿತು ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದ ಮರಣಮೃದಂಗ – ಸಾವಿನ ಸಂಖ್ಯೆ 31ಕ್ಕೆ ಏರಿಕೆ
ಭೂಕಂಪದ ಕೇಂದ್ರ ಬಿಂದು ನೇಪಾಳ. ಲುಂಬಿನಿ ಪ್ರಾಂತ್ಯ, ಗುಲಾರಿಯಾ ಸೇರಿದಂತೆ ನೇಪಾಳದ ಹೆಲವೆಡೆ ಇಂದು 6.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರ ತೀವ್ರತೆ ಭಾರತದ ಹಲವು ಭಾಗಗಳಲ್ಲಿ ಗೋಚರಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎರಡು ಭಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ದೆಹಲಿ ಭೂಕಂಪನಕ್ಕೂ ಒಂದು ಗಂಟೆ ಮೊದಲು ಅಸ್ಸಾಂ ಹಾಗೂ ಹರ್ಯಾಣದ ಸೋನಿಪತ್ನಲ್ಲಿ ಭೂಕಂಪನ ಸಂಭವಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನ ಬೆನ್ನಲ್ಲೇ ದೆಹಲಿ ಪೊಲೀಸರು ಸಹಾಯವಾಣಿ ತರೆದಿದ್ದಾರೆ. ಸಾರ್ವಜನಿಕರಿಗೆ ಯಾವುದೇ ನೆರವು ಬೇಕಿದ್ದಲ್ಲಿ ತಕ್ಷಣವೇ 112ಕ್ಕೆ ಕರೆ ಮಾಡಲು ಕೋರಿದ್ದಾರೆ. ಇದೇ ವೇಳೆ ಯಾರು ಆತಂಕಪಡುವ ಅಗತ್ಯವಿಲ್ಲ. ಕಟ್ಟಡ, ಕಚೇರಿ, ಮನೆಯೊಳಗಿದ್ದರೆ ಹೊರಬಂದು ಸುರಕ್ಷಿತ ತಾಣದಲ್ಲಿ ಸೇರಿ. ಹೊರಬರುವಾಗ ಲಿಫ್ಟ್ ಬಳಕೆ ಮಾಡಬೇಡಿ ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.