ನೈಸ್ ರಸ್ತೆಯಲ್ಲಿ ಹೊತ್ತಿ ಉರಿದ ಕಾರು – ತಾಯಿ ಇಬ್ಬರು ಮಕ್ಕಳು ಸಜೀವ ದಹನ, ತಂದೆಯ ಸ್ಥಿತಿಯೂ ಗಂಭೀರ
ಗಂಡ ಹೆಂಡತಿ ಇಬ್ಬರು ಮಕ್ಕಳು. ತಂದೆ ಆನ್‌ಲೈನ್‌ನಲ್ಲಿ ಕಾರನ್ನು ಬಾಡಿಗೆ ಪಡೆದು ನಾಗಸಂದ್ರದಲ್ಲಿರುವ ಐಕಿಯಾಕ್ಕೆ ಕುಟುಂಬ ಸಮೇತ ಹೋಗಿದ್ದರು. ನಂತರ ರಾತ್ರಿ ಹೊರಗಡೆ ಊಟ ಮಾಡಿ ನೈಟ್‌ಔಟ್ ಹೋಗಿದ್ದರು. ಇಡೀ ಕುಟಂಬ ಸಂಭ್ರಮದಲ್ಲಿಯೇ ಕಾರೊಳಗೆ ಕೂತಿದ್ದರು. ಆದರೆ ಬೆಳಗಿನ ಜಾವ ನಡೆದಿದ್ದು ಮಾತ್ರ ಘೋರ ದುರಂತ. ನೈಸ್ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಹೊತ್ತಿ ಉರಿದು ತಾಯಿ ಮತ್ತು ಮಕ್ಕಳು ಸಜೀವ ದಹನವಾಗಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆಯಲ್ಲಿ ವಿಮಾನ ಪತನ – ಭಾರತದ ಬಿಲಿಯನೇರ್ ಹರ್ಪಾಲ್ ರಾಂಧವಾ, ಅವರ ಪುತ್ರ ಸೇರಿ 6 ಮಂದಿ ಸಾವು
ಬೆಂಗಳೂರು ಹೊರವಲಯದ ನೈಸ್ ರಸ್ತೆಯಲ್ಲಿ ಕಾರು ಲಾರಿಗೆ ಡಿಕ್ಕಿಯಾಗಿ ರಸ್ತೆ ಪಕ್ಕದ ಡಿವೈಡರ್‌ಗೆ ಡಿಕ್ಕಿಯಾಗಿತ್ತು. ಪರಿಣಾಮ, ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ತಾಯಿ ಸಿಂಧು (31), ಮಗಳು ಕುಷಾವಿ (2) ಕಾರಿನಲ್ಲೇ ಸಜೀವ ದಹನವಾಗಿದ್ದರು. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತಂದೆ ಮಹೇಂದ್ರನ್ ಮತ್ತು ಇನ್ನೊಂದು ಮಗು ಪ್ರಣವಿಯನ್ನು (6) ಉತ್ತರ ಹಳ್ಳಿಯ ಸಂತೋಷ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಚಿಕಿತ್ಸೆ ಫಲಿಸದೇ ಮಗು ಪ್ರಣವಿ ಕೂಡಾ ಸಾವನ್ನಪ್ಪಿದ್ದಾಳೆ. ತಂದೆ ಮಹೇಂದ್ರನ್‌ಗೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಅಪಘಾತವಾದ ವೇಳೆ ಕಾರಿನಲ್ಲಿದ್ದ ಪತಿ ಮಹೇಂದ್ರನ್ ಒಂದು ಮಗುವನ್ನು ಕಾರಿನಿಂದ ಹೊರಗೆ ಎಳೆದುಕೊಂಡಿದ್ದಾರೆ. ಆದರೆ ಪತ್ನಿ ಸಿಂಧು ಹಾಗೂ ಮತ್ತೊಂದು ಮಗುವಿನ ರಕ್ಷಣೆ ಸಾಧ್ಯವಾಗದೇ ಇಬ್ಬರೂ ಬೆಂಕಿಗೆ ಆಹುತಿಯಾಗಿದ್ದಾರೆ. ಇದೀಗ ಅಪ್ಪ ರಕ್ಷಿಸಿದ್ದ 6 ವರ್ಷದ ಕಂದಮ್ಮ ಪ್ರಣವಿ ಕೂಡಾ ಸಾವನ್ನಪ್ಪಿದ್ದಾಳೆ.
ಮೈಸೂರು ರಸ್ತೆ ಕಡೆಯಿಂದ ಕನಕಪುರದ ಕಡೆಗೆ ಹೋಗುತ್ತಿರುವಾಗ ಸೋಂಪುರ ಜಂಕ್ಷನ್ ಬಳಿ ಕಾರು ಕಂಟ್ರೋಲ್ ತಪ್ಪಿ ಡಿವೈಡರ್ ದಾಟಿ ಎದುರು ರಸ್ತೆಗೆ ಹೋಗಿ ಪಲ್ಟಿಯಾಗಿದೆ. ಈ ವೇಳೆ ಕನಕಪುರ ರಸ್ತೆ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಎದುರು ರಸ್ತೆಯಲ್ಲಿ ಬರುತ್ತಿದ್ದ ಲಾರಿ ಚಾಲಕ ಕಾರು ರಸ್ತೆಗೆ ಬಂದಿದ್ದನ್ನು ನೋಡಿ ಗಾಬರಿಗೊಂಡು ಲಾರಿಯನ್ನು ಎಡಕ್ಕೆ ತೆಗೆದುಕೊಂಡ ಪರಿಣಾಮ ಲಾರಿ ಪಲ್ಟಿ ಹೊಡೆದಿದೆ. ಲಾರಿ ಕೂಡ ಸಂಪೂರ್ಣ ಜಖಂ ಆಗಿದೆ. ಸುಟ್ಟು ಕರಕಲಾದ ಕಾರನ್ನು ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಗೆ ಪೊಲೀಸರು ಶಿಫ್ಟ್ ಮಾಡಿದ್ದಾರೆ. ಲಾರಿ ಪಲ್ಟಿಯಾದ ಪರಿಣಾಮ ಲಾರಿ ಚಾಲಕ ಭಾರತಿ ರಾಜನ್‌ಗೂ ಗಾಯಗಳಾಗಿವೆ. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ಶಿವಪ್ರಕಾಶ್ , ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಮಹೇಂದ್ರನ್, ಟಾಟಾ ನೆಕ್ಸಾನ್ ಕಾರು ಚಾಲನೆ ಮಾಡುತ್ತಿದ್ದರು. ಮೈಸೂರು ರೋಡ್‌ನಿಂದ ಕನಕಪುರದ ಕಡೆಗೆ ಹೋಗುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಎದುರು ರಸ್ತೆಗೆ ಬಂದು ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ಮೊದಲು ಇಬ್ಬರು, ಈಗ ಒಬ್ಬರು ಸಾವನ್ನಪ್ಪಿದ್ದಾರೆ. ಓವರ್ ಸ್ಪೀಡ್ ಆಗಿ ಬಂದಿರೋದೇ ಅಪಘಾತಕ್ಕೆ ಕಾರಣ ಎನ್ನುವುದು ಗೊತ್ತಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಾರಿನಲ್ಲಿದ್ದವರು ರಾಮಮೂರ್ತಿ ನಗರದ ಮನೆಗೆ ಹೋಗುತ್ತಿದ್ದರು. ಸರ್ಜಾಪುರದ ಕಡೆಯಿಂದ ರಾಮಮೂರ್ತಿ ನಗರಕ್ಕೆ ಹೋಗುತ್ತಿದ್ದರು. ಮಹೇಂದ್ರನ್ ಆನ್‌ಲೈನ್‌ನಲ್ಲಿ ಕಾರ್ ಬಾಡಿಗೆ ಪಡೆದು ರಾತ್ರಿ ಕುಟುಂಬ ಸಮೇತರಾಗಿ ನಾಗಸಂದ್ರಕ್ಕೆ ಬಂದಿದ್ದರು. ಇಂದು ಬೆಳಗಿನ ಜಾವ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಸೋಮವಾರ ತುಮಕೂರು ರಸ್ತೆಯ ಐಕಿಯಾ ಫರ್ನಿಚರ್‌ಗೆ ಹೋಗಿದ್ದ ಫ್ಯಾಮಿಲಿ ರಾತ್ರಿ ಊಟ ಮಾಡಿಕೊಂಡು ನೈಟ್ಔಟ್ ಹೊರಟಿದ್ದರು. ತುಮಕೂರು ರಸ್ತೆಯಿಂದ ಸರ್ಜಾಪುರ ರಸ್ತೆ ಮೂಲಕ ರಾಮಮೂರ್ತಿ ನಗರಕ್ಕೆ ಹೊರಟಿದ್ದರು. ಅತಿಯಾದ ವೇಗ ಅಥವಾ ಕಾರಿನಲ್ಲಿದ್ದ ನೀರಿನ ಬಾಟಲ್ ಬ್ರೇಕ್ ಹತ್ತಿರ ಸಿಲುಕಿಕೊಂಡು ಈ ರೀತಿ ಘಟನೆ ನಡೆದಿರುವ ಶಂಕೆ ಇದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.