ಜೈಸ್ವಾಲ್ ಭರ್ಜರಿ ಶತಕ – ಏಷ್ಯನ್ ಗೇಮ್ಸ್ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ
ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್ನಲ್ಲಿ ನೇಪಾಳವನ್ನು ಸೋಲಿಸಿದ ಟೀಮ್ ಇಂಡಿಯಾ ಸೆಮಿ ಫೈನಲ್ ಪ್ರವೇಶಿಸಿದೆ. ಯಶಸ್ವಿ ಜೈಸ್ವಾಲ್ ಅವರ ಸ್ಫೋಟಕ ಶತಕ ಹಾಗೂ ರವಿ ಬಿಷ್ಟೋಯಿ ಅವರ ಸ್ಪಿನ್ ಜಾದು ನೆರವಿನಿಂದ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ತಂಡವನ್ನು ತೊರೆದು ಮುಂಬೈಗೆ ಬಂದಿದ್ದೇಕೆ ವಿರಾಟ್ ಕೊಹ್ಲಿ?
ಚೀನಾದ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್ನಲ್ಲಿ ನೇಪಾಳ ತಂಡವನ್ನು 23 ರನ್ಗಳಿಂದ ಮಣಿಸಿರುವ ಟೀಂ ಇಂಡಿಯಾ ಸೆಮಿ ಫೈನಲ್ಗೆ ಪ್ರವೇಶಿಸಿದೆ. ಪುರುಷರ ಟಿ20 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿ ಫೈನಲ್ ಗೆ ಪ್ರವೇಶ ಪಡೆದಿದೆ. ಟಾಸ್ ಸೋತು ಕಣಕ್ಕಿಳಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಬೊಂಬಾಟ್ ಆರಂಭ ಒದಗಿಸಿದರು. ಜೈಸ್ವಾಲ್ ಸಿಕ್ಸರ್ಗಳ ಮಳೆ ಸುರಿಸಿದರು. ಗಾಯಕ್ವಾಡ್ ಕೂಡಾ ಜೈಸ್ವಾಲ್ಗೆ ಉತ್ತಮ ಸಾಥ್ ನೀಡಿದರು. ಈ ಜೋಡಿ ಕೇವಲ 9.5 ಓವರ್ಗಳಲ್ಲಿ ತಂಡದ ಮೊತ್ತವನ್ನು 100 ಗಡಿ ದಾಟಿಸಿತು. ಜೈಸ್ವಾಲ್ 8 ಬೌಂಡರಿ ಹಾಗೂ 7 ಅಮೋಘ ಸಿಕ್ಸರ್ಗಳೊಂದಿಗೆ ಶತಕ ಬಾರಿಸಿದರು. ರುತುರಾಜ್ 23 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು.
ಟೀಂ ಇಂಡಿಯಾ ನೀಡಿದ್ದ 203 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ನೇಪಾಳ ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ವೇಗಿ ಅವೇಶ್ ಖಾನ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯ್ ತಲಾ 3 ವಿಕೆಟ್ ಪಡೆದರೆ ಅರ್ಷದೀಪ್ ಸಿಂಗ್ 2 ಹಾಗೂ ರವಿಶ್ರೀನಿವಾಸನ್ ಸಾಯಿ ಕಿಶೋರ್ 1 ವಿಕೆಟ್ ಪಡೆದರು.