ಬೆಂಗಳೂರು ಕಂಬಳದಲ್ಲಿ ಭಾಗವಹಿಸಲಿವೆ 125ಕ್ಕೂ ಅಧಿಕ ಜತೆ ಕೋಣಗಳು – ಮಂಗಳೂರಿಂದಲೇ ಬರುತ್ತೆ ಕೋಣಗಳಿಗೆ ಕುಡಿಯುವ ನೀರು!
ಬೆಂಗಳೂರು: ಇದೇ ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 25 ಮತ್ತು 26ರಂದು “ಬೆಂಗಳೂರು ಕಂಬಳ-ನಮ್ಮ ಕಂಬಳ’ ಶಿರ್ಷಿಕೆಯಡಿ ಕಂಬಳ ನಡೆಯಲಿದ್ದು, ಈಗಾಗಲೇ ಪೂರ್ವಭಾವಿ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ಎರಡು ದಿನಗಳ ಕಾಲ ನಡೆಯಲಿರುವ ಕಂಬಳಕ್ಕೆ 7 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ. ಕಂಬಳ ವೀಕ್ಷಿಸಲು ಗ್ಯಾಲರಿ, 150ಕ್ಕೂ ಅಧಿಕ ಕರಾವಳಿಯ ವೈವಿಧ್ಯತೆಯನ್ನು ಸಾರುವ ಆಹಾರ, ತಿಂಡಿ ತಿನಿಸುಗಳು, ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ 145 ಮೀಟರ್ ಉದ್ದದ ಜೋಡುಕರೆ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಜೋಡುಕೆರೆ ಕಂಬಳ! – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಅರಮನೆ ಮೈದಾನ
ನ. 23ರಂದು ಮಂಗಳೂರಿನಿಂದ 125ಕ್ಕೂ ಅಧಿಕ ಜತೆ ಕೋಣಗಳು ಮೆರವಣಿಗೆ ಮೂಲಕ ಹೊರಡಲಿದ್ದು ಹಾಸನದಲ್ಲಿ ಭವ್ಯ ಸ್ವಾಗತ ನೀಡಲಿವೆ. ಅಲ್ಲಿ 2 ಗಂಟೆಗಳ ಕಾಲ ತಂಗಲು ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಬೆಂಗಳೂರಿನಲ್ಲಿ ಒಂದು ದಿನ ವಿಶ್ರಾಂತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಂಬಳಕ್ಕೆ ತೆರಳುವ ಕೋಣಗಳಿಗೆ, ಪರಿಚಾರಕರಿಗೆ ಬೇಕಾದ ವ್ಯವಸ್ಥೆಗಳನ್ನು ಈಗಾಗಲೇ ರೂಪಿಸಲಾಗಿದೆ ಎಂದು ಅಶೋಕ್ ರೈ ತಿಳಿಸಿದ್ದಾರೆ.
ಕೋಣಗಳ ಯಜಮಾನರ ಆಗ್ರಹದಂತೆ ಕೋಣಗಳ ಕ್ಷಮತೆ, ಆರೋಗ್ಯ ಕಾಪಾಡುವ ದೃಷ್ಟಿಯಿಂದ 6 ಟ್ಯಾಂಕರ್ ನೀರನ್ನು ದ.ಕ. ಜಿಲ್ಲೆಯಿಂದಲೇ ಕೊಂಡೊಯ್ಯಲಾಗುತ್ತಿದೆ. ಕಂಬಳಕ್ಕೆ ಅಂದಾಜು 5ರಿಂದ 6 ಕೋ. ರೂ. ವೆಚ್ಚ ತಗಲಲಿದ್ದು ಕಂಬಳದಲ್ಲಿ ಫಸ್ಟ್ ಬಂದ ಕೋಣಗಳಿಗೆ 2 ಪವನ್ ಬಂಗಾರ, ದ್ವಿತೀಯ ಕೋಣಗಳಿಗೆ 1 ಪವನ್ ಬಂಗಾರ, ಭಾಗವಹಿಸಿದ ಪ್ರತಿ ಕೋಣಗಳಿಗೂ ಬಂಗಾರದ ಪದಕ ನೀಡಲಾಗುವುದು ಎಂದು ಅಶೋಕ್ ರೈ ತಿಳಿಸಿದರು.