ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಸ್ಥಳದಲ್ಲೇ ಬೀಳುತ್ತೆ ದಂಡ! – ರಾಜ್ಯದ 6 ಹೆದ್ದಾರಿಗಳಲ್ಲಿ ಕ್ಯಾಮೆರಾ ಕಣ್ಗಾವಲು
ಬೆಂಗಳೂರು: ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ವಾಹನ ಸವಾರರು ಪದೇ ಪದೆ ನಿಯಮ ಉಲ್ಲಂಘಿಸುತ್ತಾರೆ. ನಿಯಮ ಉಲ್ಲಂಘನೆಯಿಂದಾಗಿ ಅಪಘಾತಕ್ಕೆ ಕಾರಣವಾಗುತ್ತದೆ. ಇದೀಗ ಸಾರಿಗೆ ಇಲಾಖೆಯು ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ವಾಹನಗಳ ಅತಿಯಾದ ವೇಗ ಮತ್ತು ಸಂಚಾರ ನಿಯಮ ಉಲ್ಲಂಘನೆ ಮೇಲೆ ಕ್ಯಾಮೆರಾ ಕಣ್ಗಾವಲು ಇಟ್ಟು ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ.
ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಅತಿಯಾದ ವೇಗ, ಸುರಕ್ಷತಾ ನಿಯಮಗಳ ನಿರ್ಲಕ್ಷ್ಯದಿಂದಾಗಿ ನಿರಂತರವಾಗಿ ಅಪಘಾತ ಸಂಭವಿಸುತ್ತಿದೆ. ನಿಯಮ ಉಲ್ಲಂಘನೆಯಿಂದಾಗಿ ಹೆದ್ದಾರಿಗಳಲ್ಲಿ ಹೆಚ್ಚಿನ ಸಾವು-ನೋವು ವರದಿಯಾಗುತ್ತಿದ್ದು, ಸಾರಿಗೆ ಇಲಾಖೆಯು ಅಪಘಾತಗಳ ಪ್ರಮಾಣ ತಗ್ಗಿಸಲು ಮತ್ತು ವಾಹನ ಸವಾರರ ಸುರಕ್ಷತೆಗಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಮೇಲೆ ಹದ್ದಿನ ಕಣ್ಣಿಡಲಿದೆ. ಆರಂಭದಲ್ಲಿ ಸಾರಿಗೆ ಇಲಾಖೆಯು ವಾಹನ ಸಂಚಾರ ಮತ್ತು ಅಪಘಾತಗಳ ಪ್ರಮಾಣ ಹೆಚ್ಚಿರುವ ಹೆದ್ದಾರಿಗಳನ್ನೇ ಆಯ್ಕೆ ಮಾಡಿಕೊಂಡು ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಹಾಕಲಿದೆ. ಪ್ರಾಯೋಗಿಕವಾಗಿ ರಾಜ್ಯದ ಆರು ಹೆದ್ದಾರಿಗಳಲ್ಲಿ ಅಕ್ಟೋಬರ್ ವೇಳೆಗೆ ಈ ವ್ಯವಸ್ಥೆ ಜಾರಿಯಾಗಲಿದೆ. ನಂತರ ಇತರೆ ಹೆದ್ದಾರಿಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಸ್ತೆಯೆಂದು ನದಿಯನ್ನು ತೋರಿಸಿದ ಜಿಪಿಎಸ್ ಮ್ಯಾಪ್ – ಕಾರು ಮುಳುಗಿ ಇಬ್ಬರು ವೈದ್ಯರ ದಾರುಣ ಅಂತ್ಯ
ನಿಯಮ ಉಲ್ಲಂಘನೆಯ ದೃಶ್ಯ ಸಮೇತ ಸೆರೆ
ಹೆದ್ದಾರಿಗಳಲ್ಲಿ ವಾಹನಗಳ ಅತಿಯಾದ ವೇಗ ಮತ್ತು ಸಂಚಾರ ನಿಯಮ ಉಲ್ಲಂಘನೆಯ ಪರಿಶೀಲನೆಗಾಗಿ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ವಾಹನಗಳ ವೇಗದ ವಿವರದ ಪ್ರದರ್ಶನಕ್ಕೆ ಡಿಜಿಟಲ್ ಡಿಸ್ಪ್ಲೇ ಬೋರ್ಡ್ನ ವ್ಯವಸ್ಥೆ ಮಾಡಲಾಗುತ್ತದೆ. ಡಿಜಿಟಲ್ ಡಿಸ್ಪ್ಲೇ ಬೋರ್ಡ್ ಮತ್ತು ಎಐ ಕ್ಯಾಮೆರಾಗಳ ನಡುವೆ ಸಂಪರ್ಕವಿರುತ್ತದೆ. ಎಐ ಕ್ಯಾಮೆರಾಗಳು ವಾಹನಗಳ ವೇಗ, ಪಥ ಶಿಸ್ತು ಉಲ್ಲಂಘನೆ, ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದೂ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದೃಶ್ಯಾವಳಿಯನ್ನು ವಾಹನದ ನೋಂದಣಿ ಸಂಖ್ಯೆ ಸಮೇತ ಸೆರೆ ಹಿಡಿಯಲಿವೆ.
200 ಮೀಟರ್ವರೆಗೂ ದೃಶ್ಯ ಸೆರೆ
ಸುಧಾರಿತ ತಂತ್ರಜ್ಞಾನದ ಎಐ ಕ್ಯಾಮೆರಾಗಳು ಸುಮಾರು 200 ಮೀಟರ್ ದೂರದವರೆಗೂ ವಾಹನಗಳ ದೃಶ್ಯಾವಳಿ ಸೆರೆ ಹಿಡಿಯಬಲ್ಲವು. ವಾಹನ ಎಷ್ಟು ವೇಗದಲ್ಲಿಸಂಚರಿಸುತ್ತಿದೆ ಮತ್ತು ಯಾವ ಸಂಚಾರ ನಿಯಮದ ಉಲ್ಲಂಘನೆಯಾಗಿದೆ ಎಂಬ ವಿವರ ನೀಡುತ್ತದೆ. ಜತೆಗೆ, ಆ ವಿವರ ಧ್ವನಿ ವರ್ಧಕದಲ್ಲೂಧ್ವನಿಸಲಿದೆ. ಅಲ್ಲದೆ, ಸಂಚಾರ ನಿಯಮ ಪಾಲಿಸುವಂತೆ ಜಾಗೃತಿಯ ಸಂದೇಶ ನೀಡಲಾಗುತ್ತದೆ.
ಬೆರಳ ತುದಿಯಲ್ಲೇ ಮಾಹಿತಿ
ಎಐ ಕ್ಯಾಮೆರಾಗಳನ್ನು ಸಾರಿಗೆ ಇಲಾಖೆಯ ವೆಬ್ ಆಧಾರಿತ ಸಾರಥಿ-4 ಮತ್ತು ವಾಹನ್-4 ತಂತ್ರಾಂಶದ ಜತೆ ಜೋಡಣೆ ಮಾಡಲಾಗುತ್ತದೆ. ಕ್ಯಾಮೆರಾಗಳಲ್ಲಿ ವಾಹನದ ನೋಂದಣಿ ಸಂಖ್ಯೆ ಸೆರೆಯಾದ ತಕ್ಷಣ ಸಂಚಾರ ನಿಯಮ ಉಲ್ಲಂಘನೆಯ ಸಂಪೂರ್ಣ ವಿವರವು ಇಲಾಖೆ ಸಿಬ್ಬಂದಿಗೆ ಬೆರಳ ತುದಿಯಲ್ಲೇ ಸಿಗಲಿದೆ. ವಾಹನದ ರಹದಾರಿ ಪರವಾನಗಿ, ಕಾರ್ಯಕ್ಷಮತೆ ಪ್ರಮಾಣಪತ್ರ (ಎಫ್.ಸಿ.), ವಿಮೆ ಸೇರಿದಂತೆ ಇತರೆ ದಾಖಲೆಗಳು ಚಾಲ್ತಿಯಲ್ಲಿವೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ. ತೆರಿಗೆ ಬಾಕಿ ವಿವರವೂ ತಿಳಿಯಲಿದೆ. ಜತೆಗೆ, ಹಿಂದಿನ ನಿಯಮ ಉಲ್ಲಂಘನೆ ಪ್ರಕರಣಗಳ ಮಾಹಿತಿಯೂ ಸಿಗುತ್ತದೆ. ಈ ವಿವರದ ಆಧಾರದಲ್ಲಿಸಿಬ್ಬಂದಿ ಪಿಡಿಎ (ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್) ಉಪಕರಣಗಳ ಮೂಲಕ ದಂಡ ವಿಧಿಸುತ್ತಾರೆ. ಅಲ್ಲದೆ, ಇ-ಚಲನ್ ವ್ಯವಸ್ಥೆಯಡಿ ಸ್ಥಳದಲ್ಲೇ ದಂಡ ವಸೂಲಿ ಮಾಡುತ್ತಾರೆ.
ಯಾವ ಹೆದ್ದಾರಿಗಳಲ್ಲಿ ಕ್ಯಾಮರಾ ಕಣ್ಗಾವಲು ?
- ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ
- ರಾಷ್ಟ್ರೀಯ ಹೆದ್ದಾರಿ 7ರ ದೇವನಹಳ್ಳಿ ಟೋಲ್ಗೇಟ್
- ತುಮಕೂರಿನ ಕ್ಯಾತ್ಸಂದ್ರ
- ರಾಷ್ಟ್ರೀಯ ಹೆದ್ದಾರಿ 4ರ ಪಾರ್ಲೆಜಿ ಫ್ಯಾಕ್ಟರಿ ಬಳಿ
- ಹೊಸೂರು ರಸ್ತೆಯ ಅತ್ತಿಬೆಲೆ ಬಳಿ
- ರಾಷ್ಟ್ರೀಯ ಹೆದ್ದಾರಿ 73ರ ಹಿಟ್ನಾಳ ಟೋಲ್ಗೇಟ್