ಇಡೀ ಜಗತ್ತನ್ನೇ ತಲ್ಲಣಗೊಳಿಸಲಿದೆ ಕೋವಿಡ್‌ಗಿಂತಲೂ ಮಾರಣಾಂತಿಕ ವೈರಸ್‌! -ವಿಶ್ವಾದ್ಯಂತ 5 ಕೋಟಿ ಜನ ಬಲಿಯಾಗುವ ಭೀತಿ!

ಇಡೀ ಜಗತ್ತನ್ನೇ ತಲ್ಲಣಗೊಳಿಸಲಿದೆ ಕೋವಿಡ್‌ಗಿಂತಲೂ ಮಾರಣಾಂತಿಕ ವೈರಸ್‌! -ವಿಶ್ವಾದ್ಯಂತ 5 ಕೋಟಿ ಜನ ಬಲಿಯಾಗುವ ಭೀತಿ!

ಕೊರೋನಾ ವೈರಸ್‌ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಇದರ ರೌದ್ರ ನರ್ತನಕ್ಕೆ ಕೋಟ್ಯಂತರ ಜನರು ಬಲಿಯಾಗಿದ್ದಾರೆ. ಈ ಮಹಾಮಾರಿಯಿಂದ ಮುಕ್ತಿ ಸಿಕ್ಕಿತು ಅಂತಾ ಅಂದುಕೊಳ್ಳುತ್ತಿವಾಗಲೇ ಈಗ ಮತ್ತೊಂದು ವೈರಸ್‌ನ ಆತಂಕ ಎದುರಾಗಿದೆ. ಈ ವೈರಸ್‌ ಕೋವಿಡ್‌ಗಿಂತಲೂ ಮಾರಣಾಂತಿಕವಾಗಿದ್ದು ವಿಶ್ವಾದ್ಯಂತ 5 ಕೋಟಿ ಜನರ ಸಾವಿಗೆ ಕಾರಣ ಆಗಲಿದೆ ಎಂದು ಬ್ರಿಟನ್‌ನ ಆರೋಗ್ಯ ತಜ್ಞರೊಬ್ಬರು ಭವಿಷ್ಯ ನುಡಿದಿದ್ದಾರೆ.

ಕೊರೋನಾ ವೈರಸ್‌ ಆರ್ಭಟ ನಿಂತಿದೆ. ಇನ್ನಾದರೂ ಆರಾಮದಿಂದ ಓಡಾಡಬಹುದು ಎಂದು ಅಂದುಕೊಳ್ಳುತ್ತಿದ್ದ ಜನರಿಗೆ ಮತ್ತೊಂದು ವೈರಸ್‌ನ ಭೀತಿ ಎದುರಾಗಿದೆ. ಈ ವೈರಸ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ‘ಡಿಸೀಸ್ ಎಕ್ಸ್’ ಎಂದು ಹೆಸರು ನೀಡಿದೆ. ಈ ವೈರಸ್ ಕೋವಿಡ್ – 19 ವೈರಸ್‌ಗಿಂತಲೂ ಮಾರಕವಾಗಿದ್ದು, ಹೊಸ ಸಾಂಕ್ರಾಮಿಕ ಸೃಷ್ಟಿಸಬಲ್ಲದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕೋವಿಡ್‌ಗೆ ಹೆದರಿ ಮೂರು ವರ್ಷಗಳಿಂದ ಗೃಹಬಂಧನ – ಹೊರ ಪ್ರಪಂಚಕ್ಕೆ ಕೊನೆಗೂ ಕಾಲಿಟ್ಟ ತಾಯಿ ಮಗ

ಡಿಸೀಸ್ ಎಕ್ಸ್ಗೆ ಯಾವುದೇ ಔಷಧ ಇಲ್ಲ!

ಬ್ರಿಟನ್‌ನ ಲಸಿಕಾ ಕಾರ್ಯಪಡೆ ಮುಖ್ಯಸ್ಥರಾಗಿದ್ದ ಕೇಟ್ ಬಿಂಗ್‌ಹಾಮ್ ಈ ವೈರಸ್‌ ಬಗ್ಗೆ ಮಾಹಿತಿ ನೀಡಿದ್ದಾರೆ. 1919 – 20ರಲ್ಲಿ ವಿಶ್ವವನ್ನು ಆವರಿಸಿದ್ದ ಸ್ಪ್ಯಾನಿಷ್ ಫ್ಲೂ ಮಾದರಿಯಲ್ಲೇ ಈ ಹೊಸ ವೈರಸ್ ದಾಳಿ ಇಡಲಿದೆ. ‘ಡಿಸೀಸ್ ಎಕ್ಸ್’ ಹೊಸ ಮಾದರಿಯ ರೋಗಾಣು ಆಗಿದ್ದು, ಇದು ವೈರಸ್, ಬ್ಯಾಕ್ಟೀರಿಯಾ ಅಥವಾ ಫಂಗಸ್.. ಯಾವುದೇ ಮಾದರಿಯಲ್ಲಿ ಇರಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ‘ಡಿಸೀಸ್ ಎಕ್ಸ್’ ವಿರುದ್ದ ಹೋರಾಡಲು ಯಾವುದೇ ಚಿಕಿತ್ಸೆ ಲಭ್ಯ ಇಲ್ಲ ಎಂದು ಹೇಳಿದ್ದಾರೆ.

ಸ್ಪ್ಯಾನಿಷ್ ಫ್ಲೂನಂತೆ ಹರಡಲಿದೆ ಡಿಸೀಸ್ ಎಕ್ಸ್

1918 ರಲ್ಲಿ ಆರಂಭವಾಗಿದ್ದ ಸ್ಪ್ಯಾನಿಷ್ ಫ್ಲೂ 1920ರಲ್ಲಿ ಅಂತ್ಯ ಕಂಡಿತ್ತು. ಈ ವೈರಾಣು ವಿಶ್ವಾದ್ಯಂತ ಒಟ್ಟು 5 ಕೋಟಿ ಜನರನ್ನು ಬಲಿಪಡೆದಿತ್ತು. ಮೊದಲ ವಿಶ್ವ ಯುದ್ಧದಲ್ಲಿ ಮೃತಪಟ್ಟವರಿಗಿಂತ ಎರಡು ಪಟ್ಟು ಜನರು ಈ ರೋಗಕ್ಕೆ ಬಲಿಯಾಗಿದ್ದರು. ಇದೀಗ ‘ಡಿಸೀಸ್ ಎಕ್ಸ್’ ಇದೇ ಮಾದರಿಯಲ್ಲಿ ಹರಡಬಹುದಾಗಿದೆ. ಈಗಾಗಲೇ ಪ್ರಚಲಿತದಲ್ಲಿ ಇರುವ ಯಾವುದೇ ಒಂದು ವೈರಾಣು ಈ ರೀತಿಯ ಸಾಂಕ್ರಾಮಿಕಕ್ಕೆ ಕಾರಣ ಆಗಬಹುದಾಗಿದೆ. ‘ಡಿಸೀಸ್ ಎಕ್ಸ್’ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಆದಷ್ಟು ಬೇಗ ಲಸಿಕೆ ಕಂಡು ಹಿಡಿದು ಅದನ್ನು ವಿಶ್ವದಾದ್ಯಂತ ದಾಖಲೆ ಸಮಯದಲ್ಲಿ ಸರಬರಾಜು ಮಾಡಿ ಲಸಿಕಾ ಅಭಿಯಾನ ನಡೆಸಬೇಕಿದೆ ಎಂದು ಕೇಟ್ ಅವರು ಹೇಳಿದ್ದಾರೆ.

ಕೋವಿಡ್‌ಗೆ ಈವರೆಗೂ ವಿಶ್ವಾದ್ಯಂತ 2 ಕೋಟಿ ಜನರು ಜೀವ ಬಿಟ್ಟಿದ್ದಾರೆ. ಆದರೆ ಕೋವಿಡ್ ವಿಚಾರದಲ್ಲಿ ಒಂದು ಸಮಾಧಾನಕರ ಅಂಶವಿದೆ. ಏನೆಂದರೆ, ಬಹುತೇಕ ಕೋವಿಡ್ ರೋಗಿಗಳು ಗುಣಮುಖರಾಗಿದ್ದಾರೆ. ಆದರೆ ‘ಡಿಸೀಸ್ ಎಕ್ಸ್’ ರೋಗಾಣು ಎಬೋಲಾ ರೀತಿ ಮಾರಣಾಂತಿಕ ಆಗಿರಬಹುದು. ಏಕೆಂದರೆ ಎಬೋಲಾ ರೋಗದ ಮರಣ ಪ್ರಮಾಣ ಶೇ. 67ರಷ್ಟು ಇತ್ತು. ಒಂದು ವೇಳೆ ‘ಡಿಸೀಸ್ ಎಕ್ಸ್’ ಸೋಂಕಿನ ಮರಣ ಪ್ರಮಾಣ ಹೆಚ್ಚಾಗಿದ್ದರೆ, ಈ ರೋಗಾಣು ಮಾನವ ಕುಲಕ್ಕೇ ಸವಾಲಾಗಲಿದೆ ಎಂದು ಹೇಳಿದ್ದಾರೆ.

Shwetha M