ಮಗಳ ಸಾವಿನ ನೋವಲ್ಲೂ ವೃತ್ತಿಪರತೆ ತೋರಿಸಿದ ನಟ ವಿಜಯ್ ಆಂಥೋನಿ – ರಥಂ ಸಿನಿಮಾ ಪ್ರಚಾರದಲ್ಲಿ ಭಾಗಿ

ಮಗಳ ಸಾವಿನ ನೋವಲ್ಲೂ ವೃತ್ತಿಪರತೆ ತೋರಿಸಿದ ನಟ ವಿಜಯ್ ಆಂಥೋನಿ – ರಥಂ ಸಿನಿಮಾ ಪ್ರಚಾರದಲ್ಲಿ ಭಾಗಿ

ಎದೆಯತ್ತರಕ್ಕೆ ಬೆಳೆದು ನಿಂತ ಮಗಳು. ಇನ್ನೇನು ಓದಿನಲ್ಲಿ ತನ್ನದೇ ಆದ ಭವಿಷ್ಯ ರೂಪಿಸಿಕೊಳ್ಳುತ್ತಾಳೆ ಎಂಬ ಭರವಸೆಯಲ್ಲಿ ಇರುವಾಗಲೇ ಮುದ್ದಿನ ಮಗಳ ದುರಂತ ಅಂತ್ಯ. ಇದರಿಂದ ಅಕ್ಷರಶಃ ತಮಿಳು ನಟ ವಿಜಯ್ ಆಂಥೋನಿ ಕುಗ್ಗಿ ಹೋಗಿದ್ದರು. ಮಗಳ ಜೊತೆ ನಾನೂ ಸತ್ತು ಹೋದೆ ಎಂಬ ಪೋಸ್ಟ್ ಹಾಕಿರುವ ವಿಜಯ್ ಆಂಥೋನಿಯ ನೋವು ನೋಡಿ ಅಭಿಮಾನಿಗಳು ಕೂಡಾ ಮರುಕ ಪಟ್ಟಿದ್ದರು. ಇದೀಗ ಮಗಳ ಅಗಲಿಕೆಯ ನೋವಲ್ಲಿಯೇ ವಿಜಯ್ ಆಂಥೋನಿ ಸಿನಿಮಾ ಕೆಲಸದತ್ತ ಮುಖ ಮಾಡಿದ್ದಾರೆ.

ಇದನ್ನೂ ಓದಿ: ‘ಎಲ್ಲರನ್ನೂ ಪ್ರೀತಿಸುತ್ತೇನೆ, ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ – ಮಗಳು ಮೀರಾಳ ಡೆತ್‌ನೋಟ್‌ ನೋಡಿ ನಟ ವಿಜಯ್ ಆ್ಯಂಟನಿ ಕಣ್ಣೀರು

ಕೆಲಸದ ಮೇಲಿರುವ ಬದ್ಧತೆಯಿಂದ ಮಗಳು ಅಗಲಿ 9 ದಿನಗಳ ಬಳಿಕ ‘ರಥಂ’  ಚಿತ್ರದ ಪ್ರಚಾರ ಕಾರ್ಯದಲ್ಲಿ ವಿಜಯ್ ಆಂಥೋನಿ ಭಾಗಿಯಾಗುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ವಿಜಯ್ ಆಂಥೋನಿ ಮಗಳು ಮೀರಾ ಆತ್ಮಹತ್ಯೆಗೆ ಶರಣಾಗಿದ್ದರು. ಮಗಳ ಹಠಾತ್ ನಿಧನ ವಿಜಯ್‌ಗೆ ಶಾಕ್ ಕೊಟ್ಟಿತ್ತು. ಮಗಳ ನಿಧನದ ನೋವಿನ ನಡುವೆಯೇ ಇದೀಗ ‘ರಥಂ’ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ವೃತ್ತಿಪರತೆಗೆ ನಿಜವಾದ ಉದಾಹರಣೆ, ಸಿನಿಮಾ ಪ್ರೊಡ್ಯುಸರ್‌ಗಳು ಮತ್ತು ವೀಕ್ಷಕರ ಕುರಿತು ಕಾಳಜಿಯಿಂದ ವಿಜಯ ಆಂಟೋನಿ ಸರ್‌ ಮರಳಿದ್ದಾರೆ. ರಥಂ ಸಿನಿಮಾಕ್ಕೆ ಬೆಂಬಲ ನೀಡುವ ಸಲುವಾಗಿ ಪ್ರಚಾರಕ್ಕೆ ಬಂದಿದ್ದಾರೆ. ನಮ್ಮ ಸಿನಿಮಾ ಉದ್ಯಮಕ್ಕೆ ಇವರು ನಿಜವಾದ ಸ್ಪೂರ್ತಿ. ವೈಯಕ್ತಿಕ ನೋವಿನ ನಡುವೆಯೂ ತಂಡಕ್ಕೆ ಬೆಂಬಲ ನೀಡಿರುವುದಕ್ಕೆ ಧನ್ಯವಾದ ಸರ್‌” ಎಂದು ಸಿನಿಮಾ ನಿರ್ಮಾಪಕರಾದ ಜಿ. ಧನಂಜಯನ್‌ ಟ್ವೀಟ್‌ ಮಾಡಿದ್ದಾರೆ. ಹೃದಯ ಕಲ್ಲಾಗಿಸಿಕೊಂಡು ಸಿನಿಮಾ ಪ್ರಚಾರಕ್ಕೆ ಆಗಮಿಸಿದ ನಟನ ಕುರಿತು ಸಾಕಷ್ಟು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ಬೇಗ ಬರುವ ಅಗತ್ಯವೇನಿತ್ತು ಎಂದು ಸಾಕಷ್ಟು ಅಭಿಮಾನಿಗಳು ಪ್ರಶ್ನಿಸಿದ್ದಾರೆ. “ಇಂತಹ ದುರಂತ ನಡೆದರೆ ದೀರ್ಘಕಾಲ ಕೆಲಸಕ್ಕೆ ಮರಳುವುದು ಕಷ್ಟ, ಆದರೆ, ಇವರು ವೃತ್ತಿಪರತೆ ಮೆರೆದಿದ್ದಾರೆ” ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

ರಥಂ ಸಿನಿಮಾ ಅಕ್ಟೋಬರ್ 6ಕ್ಕೆ ರಿಲೀಸ್ ಆಗುತ್ತಿದೆ. ವಿಜಯ್ ಆಂಥೋನಿಗೆ ನಾಯಕಿಯಾಗಿ ಕನ್ನಡದ ನಟಿ ನಂದಿತಾ ಶ್ವೇತಾ ಮತ್ತು ಮಹಿಮಾ ಕಾಣಿಸಿಕೊಂಡಿದ್ದಾರೆ.

Sulekha