ಮದುವೆಯಾಗದೇ ಗರ್ಭಿಣಿಯಾದ ಅಪ್ರಾಪ್ತ ಮಗಳು – ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಕುಟುಂಬಸ್ಥರು
ವಯಸ್ಸಿನ ಹುಚ್ಚೋ, ಹುಡುಗನ ಮರುಳೋ ಓದೋ ವಯಸ್ಸಿನ ಆ ಹುಡುಗಿ ಪ್ರೀತಿಯ ಬಲೆಗೆ ಬಿದ್ದಿದ್ದಳು. ಪ್ರೇಮದ ಬಲೆ ಬೀಸಿದ್ದ ಆ ಯುವಕ ಆಕೆಯ ಜೊತೆ ದೈಹಿಕ ಸಂಬಂಧ ಬೆಳೆದಿದ್ದ. ಯಾವುದು ಸರಿ ಯಾವುದು ತಪ್ಪು ಅನ್ನೋದು ಅರ್ಥ ಆಗುವ ಮೊದಲೇ ಆ ಬಾಲಕಿ ಗರ್ಭಿಣಿಯಾಗಿದ್ದಳು. ಮಗಳ ಪರಿಸ್ಥಿತಿ ತಿಳಿದು ತಾಳ್ಮೆಯಿಂದ ಆಕೆಯ ಬಾಳನ್ನ ಸರಿ ಪಡಿಸಬೇಕಿದ್ದ ಪೋಷಕರು ಪಾಪ ಕೃತ್ಯ ಮಾಡಿದ್ದಾರೆ.
ಇದನ್ನೂ ಓದಿ : ಸೊಪ್ಪು ಎಂದು ಗಾಂಜಾ ತಿಂದ ಕುರಿಗಳ ಹಿಂಡು! – 100 ಕೆಜಿ ಗಾಂಜಾ ಸ್ವಾಹ!
ಮದುವೆಯಾಗದೇ ಗರ್ಭಿಣಿಯಾಗಿದ್ದ ಅಪ್ರಾಪ್ತ ಮಗಳಿಗೆ ಪೋಷಕರೇ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ (Uttar Pradesh) ಹಾಪುರ್‌ನಲ್ಲಿ ಘಟನೆ ನಡೆದಿದ್ದು, ಆಕೆಯ ದೇಹ 70% ಸುಟ್ಟು ಹೋಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಬಾಲಕಿ ಅಪ್ರಾಪ್ತಳು ಮಾತ್ರವಲ್ಲದೆ ಮದುವೆ ಕೂಡ ಆಗಿರಲಿಲ್ಲ. ಆದರೆ ಅದೇ ಊರಿನ ಯುವಕನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ಯುವತಿಯ ತಾಯಿ ಹಾಗೂ ಸಹೋದರ ಯುವಕನೊಂದಿಗೆ ಗಲಾಟೆಯನ್ನು ಮಾಡಿದ್ದರು. ಬಳಿಕ ಯುವತಿ ಗರ್ಭಿಣಿ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಆಕೆಯನ್ನು ಸಮೀಪದ ಅರಣ್ಯಕ್ಕೆ ಕರೆದೊಯ್ದು ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಕಿಯಲ್ಲಿ ಬೆಂದಿರುವ ಯುವತಿ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗೆ ಉನ್ನತ ಆಸ್ಪತ್ರೆಗೆ ಆಕೆಯನ್ನು ರವಾನಿಸಲಾಗಿದೆ. ಆಕೆಗೆ ಬೇಕಾದ ಚಿಕಿತ್ಸೆಯನ್ನು ನೀಡಲು ಅಗತ್ಯ ನೆರವು ನೀಡಲಾಗುವುದು. ಅಲ್ಲದೇ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ಮತ್ತು ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಹಾಪುರ್‍ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್‍ಕುಮಾರ್ ಅಗರ್ವಾಲ್ ಹೇಳಿದ್ದಾರೆ.