ಕರ್ನಾಟಕ ಬಂದ್ಗೆ ಕರಾವಳಿ ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ – ವ್ಯಾಪಾರ ವಹಿವಾಟು ಎಂದಿನಂತೆ!
ರಾಜ್ಯದಲ್ಲಿ ಮಳೆ ಕೊರತೆಯಾಗಿದ್ದು ಬರದ ಪರಿಸ್ಥಿತಿ ಎದುರಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಆದರೂ ಕೂಡ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ರಾಜ್ಯಾದ್ಯಂದ ಶುಕ್ರವಾರ ಬಂದ್. ಆದರೆ ಕರಾವಳಿ ಭಾಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕರ್ನಾಟಕ ಬಂದ್ಗೆ ನೈತಿಕ ಬೆಂಬಲ ಮಾತ್ರ ನೀಡಲಾಗಿದೆ. ಹೀಗಾಗಿ ಜನರ ನಿತ್ಯದ ವಹಿವಾಟುಗಳು ಮುಂಜಾನೆಯಿಂದಲೇ ಆರಂಭವಾಗಿವೆ. ಬೆಳಗ್ಗೆಯಿಂದಲೇ ಎಲ್ಲಾ ಹೋಟೆಲ್, ಪೆಟ್ರೋಲ್ ಬಂಕ್ಗಳು ತೆರೆದಿದ್ದು, ಎಲ್ಲಾ ಉದ್ಯಮಗಳೂ ಎಂದಿನಂತೆ ನಡೆಯುತ್ತಿವೆ. ಕರ್ನಾಟಕ ಬಂದ್ ಇದ್ದರೂ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಸರ್ಕಾರಿ ಕಚೇರಿಗಳು ಕೂಡಾ ಎಂದಿನಂತೆ ನಿರ್ವಹಿಸುತ್ತಿವೆ.
ಇದನ್ನೂ ಓದಿ: ವಿಮಾನ ಹಾರಾಟಕ್ಕೂ ತಟ್ಟಿದ ಕರ್ನಾಟಕ ಬಂದ್ ಬಿಸಿ! – ಸರ್ಕಾರಿ ಬಸ್ಗಳಿದ್ದರೂ ಪ್ರಯಾಣಿಕರು ಇಲ್ಲ!
ಕರ್ನಾಟಕ ಬಂದ್ಗೆ ಶಿವಮೊಗ್ಗದಲ್ಲಿ ನೀರಸ ಪ್ರತಿಕ್ರಿಯೆ!
ಕರ್ನಾಟಕ ಬಂದ್ಗೆ ಶಿವಮೊಗ್ಗದಲ್ಲೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಬಸ್ – ಆಟೋಗಗಳು ರಸ್ತೆಗಿಳಿದಿವೆ. ಅಂಗಡಿ ಬಾಗಿಲು ತೆರೆಯಲಾಗುತ್ತಿದ್ದು, ವ್ಯಾಪಾರ ವಹಿವಾಟು ಎಂದಿನಂತೆ ನಡೆಯುತ್ತಿದೆ. ಸರ್ಕಾರಿ ಕಚೇರಿಗಳು ಕೂಡ ಕಾರ್ಯನಿರ್ವಹಿಸುತ್ತಿವೆ.
ಜೀವನದಿ ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಇದಕ್ಕೆ ರಾಜ್ಯಾದ್ಯಂತ 1,600ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿ-ಜೆಡಿಎಸ್ ಕೂಡಾ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಬಂದ್ ಬೆಳಗ್ಗೆ 6 ಗಂಟೆಯಿಂದ ಪ್ರಾರಂಭವಾಗಿ ಸಂಜೆ 6 ಗಂಟೆ ವರೆಗೂ ನಡೆಯಲಿದೆ.