ವಿಮಾನ ಹಾರಾಟಕ್ಕೂ ತಟ್ಟಿದ ಕರ್ನಾಟಕ ಬಂದ್ ಬಿಸಿ! – ಸರ್ಕಾರಿ ಬಸ್ಗಳಿದ್ದರೂ ಪ್ರಯಾಣಿಕರು ಇಲ್ಲ!
ಬೆಂಗಳೂರು: ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ಕರ್ನಾಟಕ ಬಂದ್ ಮಾಡಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಾವೇರಿ ನೀರಿಗಾಗಿ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದೀಗ ಬಂದ್ ಬಿಸಿ ವಿಮಾನಗಳಿಗೂ ತಟ್ಟಿದೆ. ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳು ರದ್ದಾಗಿವೆ.
ಬೆಂಗಳೂರಿನಲ್ಲಿ ಪ್ರತಿಭಟನಾ ಕಾವು ಜೋರಾಗಿದೆ. ಪ್ರಯಾಣಿಕರು ಇಲ್ಲದ ಕಾರಣ ಒಟ್ಟು 44 ವಿಮಾನಗಳನ್ನು ರದ್ದುಗೊಳಿಸಲಾಗಿದೆ.ದೆಹಲಿ, ಮುಂಬೈ, ಕೊಲ್ಕತ್ತಾ ಮಂಗಳೂರು ಸೇರಿದಂತೆ ವಿವಿದೆಡೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಒಟ್ಟು 22 ವಿಮಾನಗಳು ರದ್ದಾಗಿವೆ. ಇನ್ನು ಬೆಂಗಳೂರಿನಿಂದ ವಿವಿದೆಡೆಗೆ ಹೋಗಬೇಕಿದ್ದ 22 ವಿಮಾನಗಳ ಹಾರಾಟ ಸ್ಥಗಿತಗೊಂಡಿವೆ.
ಇದನ್ನೂ ಓದಿ: ಕಾವೇರಿ ನೀರಿಗಾಗಿ ಕರ್ನಾಟಕ ಬಂದ್ – ಹಲವೆಡೆ ಪ್ರತಿಭಟನಾಕಾರರು ಖಾಕಿ ವಶಕ್ಕೆ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಆಟೋ, ಕ್ಯಾಬ್, ಓಲಾ, ಊಬರ್ ಸಂಚಾರ ಇಲ್ಲ. ಹೀಗಾಗಿ ಜನರ ಓಡಾಟ ವಿರಳವಾಗಿದ್ದು, ಬಂದ್ಗೆ ಕರೆ ಕೊಟ್ಟಿದ್ದರಿಂದ ಯಾರು ಇಂದಿನ ದಿನಕ್ಕೆ ಪ್ಲೈಟ್ ಬುಕ್ ಮಾಡಿಲ್ಲ. ಇನ್ನೂ ಕೆಲವರು ಬುಕ್ ಮಾಡಿದ್ದರೂ ವಿಮಾನ ನಿಲ್ದಾಣಕ್ಕೆ ಹೋಗಲು ವಾಹನಗಳು ಇಲ್ಲದಿದ್ದರಿಂದ ಫ್ಲೈಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
ಸರ್ಕಾರಿ ಬಸ್ಗಳಿದ್ದರೂ ಪ್ರಯಾಣಿಕರು ಇಲ್ಲ!
ಕರ್ನಾಟಕ ಬಂದ್ಗೆ ಸರ್ಕಾರಿ ಸಾರಿಗೆ ಬೆಂಬಲ ನೀಡದೇ ಇದ್ದರೂ ಜನ ಬಾರದ ಕಾರಣ ಕಡಿಮೆ ಪ್ರಮಾಣದಲ್ಲಿ ಬಸ್ಸುಗಳು ರಸ್ತೆಗೆ ಇಳಿದಿದೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಸ್ಸುಗಳಿದ್ದರೂ ಪ್ರಯಾಣಿಕರು ಬರುತ್ತಿಲ್ಲ. ಪ್ಲಾಟ್ ಫಾರ್ಮ್ ಕೂಡಾ ಬಿಕೋ ಎನ್ನುತ್ತಿದ್ದು, ಕಡಿಮೆ ಸಂಖ್ಯೆಯ ಪ್ರಯಾಣಿಕರು ಬಸ್ಸು ಹತ್ತಿದ್ದಾರೆ. ಉತ್ತರ ಕರ್ನಾಟಕ ಭಾಗ, ಮಲೆನಾಡು, ಕರಾವಳಿ ಭಾಗಕ್ಕೆ ತೆರಳುವ ಬಸ್ಸುಗಳ ಪ್ರಯಾಣಿಕರ ಸಂಖ್ಯೆ ಭಾರೀ ಇಳಿಕೆಯಾಗಿದೆ. ಬಂದ್ ಹಿನ್ನೆಲೆಯಲ್ಲಿ 50% ಕೆಎಸ್ಆರ್ಟಿಸಿ ಬಸ್ಸುಗಳು ಮಾತ್ರ ರಸ್ತೆಗೆ ಇಳಿದಿದೆ. ಘಟಕ ನಿರ್ವಾಹಕರು ಅಗತ್ಯ ಇರುವ ಜಿಲ್ಲೆಗಳಿಗೆ ಪ್ರಯಾಣಿಕರ ವ್ಯವಸ್ಥೆ ನೋಡಿಕೊಂಡು ಬಸ್ ಸಂಚಾರ ಮಾಡಲು ಕೆಎಸ್ಆರ್ಟಿಸಿ ಸೂಚನೆ ನೀಡಿದೆ.