ಬಂದ್‌ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ! – ಕರ್ನಾಟಕ ಬಂದ್‌ಗೆ ಅನುಮತಿಯಿಲ್ಲ- ಗೃಹ ಸಚಿವ ಪರಮೇಶ್ವರ್

ಬಂದ್‌ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ! – ಕರ್ನಾಟಕ ಬಂದ್‌ಗೆ ಅನುಮತಿಯಿಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ನಾಳೆ(ಶುಕ್ರವಾರ) ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಈ ಬಂದ್​ಗೆ ನೂರಾರು ಸಂಘಟನೆಗಳು ಬೆಂಬಲ ನೀಡಿದೆ. ಸಂಘಟನೆಗಳು ಬೃಹತ್ ಪ್ರತಿಭಟನೆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸುಪ್ರೀಂಕೋರ್ಟ್​ ಗಮನಸೆಳೆಯುವ ಪಯತ್ನಕ್ಕೆ ಮುಂದಾಗಿವೆ. ಈ ಬಗ್ಗೆ ಗೃಹಸಚಿವ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ. ಸೆಪ್ಟೆಂಬರ್ 29ರಂದು ಪ್ರತಿಭಟನೆಗೆ ಮಾತ್ರ ಅವಕಾಶವಿದೆ. ಯಾರಾದರೂ ಬಂದ್ ಆಚರಿಸುವಂತೆ ಬಲವಂತ ಮಾಡಿದರೆ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್‌ಗೆ ಕರೆ ನೀಡಿರುವ ಸಂಘಟನೆಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ನ್ಯಾಯಾಲಯದ ನಿರ್ದೇಶನದಂತೆ ಬಂದ್ ಆಚರಿಸುವಂತಿಲ್ಲ. ಅಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಮೊನ್ನೆ ಬೆಂಗಳೂರು ಬಂದ್ ವೇಳೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ. ಇದನ್ನು ಧಿಕ್ಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಇದನ್ನೂ ಓದಿ: ಕಾವೇರಿ ವಿಚಾರದಲ್ಲಿ ಕಾಂಗ್ರೆಸ್‌ ನ ಚಿಲ್ಲರೆ ರಾಜಕಾರಣ..  ವಿದ್ಯುತ್ ಪೂರೈಕೆ ಮಾಡದಷ್ಟು ನಿಶಕ್ತವಾಗಿದೆ – ಸರ್ಕಾರದ ವಿರುದ್ಧ ಬಿಜೆಪಿ ಟೀಕಾಪ್ರಹಾರ

ಬಂದ್‌ನಿಂದಾಗಿ 1,500 ರಿಂದ 2,000 ಕೋಟಿ ರೂಪಾಯಿ ನಷ್ಟ!

ಸೆಪ್ಟೆಂಬರ್ 26 ರಂದು ಬೆಂಗಳೂರು ಬಂದ್‌ನಿಂದಾಗಿ ಅಂದಾಜು 1,500 ರಿಂದ 2,000 ಕೋಟಿ ರೂಪಾಯಿ ನಷ್ಟವಾಗಿದೆ. ಈ ಮಧ್ಯೆ, ಇನ್ನೊಂದು ಬಾರಿ ಬಂದ್ ಆಚರಿಸಿದರೆ, ಅದು ಆರ್ಥಿಕತೆಯ ದೃಷ್ಟಿಯಿಂದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಇದನ್ನು ಸಂಘ ಸಂಸ್ಥೆಗಳು ಅರಿಯಬೇಕು. ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು, ಪ್ರತಿಭಟನೆ ನಡೆಸಲಿ. ಆದರೆ, ಬಂದ್‌ ಮಾಡಲು ಯತ್ನಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಬೇಕು

ಕಾನೂನು ಚೌಕಟ್ಟಿನಲ್ಲಿ ನಡೆಸುವ ಪ್ರತಿಭಟನೆಗೆ ಅವಕಾಶ ನೀಡಲಾಗುವುದು. ತಮಿಳುನಾಡು ಸರ್ಕಾರದೊಂದಿಗೆ ಯಾವುದೇ ರಾಜಿ ಇಲ್ಲ. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಬಿಜೆಪಿ ಮತ್ತು ಜೆಡಿಎಸ್ ಇತ್ತೀಚೆಗೆ ಮೈತ್ರಿ ಮಾಡಿಕೊಂಡಿವೆ. ಸರ್ಕಾರವನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

Shwetha M