ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಮುಂದುವರೆದ ಪದಕ ಬೇಟೆ – 4ನೇ ಚಿನ್ನ ಸಮೇತ 8 ಪದಕ ದೋಚಿದ ಭಾರತೀಯ ಅಥ್ಲೀಟ್‌ಗಳು
ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಸಾಲಿನ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಬೇಟೆ ಮುಂದುವರಿಸಿದೆ. ಭಾರತೀಯ ಅಥ್ಲೀಟ್‌ಗಳು ನಾಲ್ಕನೇ ದಿನವೂ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಅದರಲ್ಲೂ ಭಾರತೀಯ ಶೂಟರ್‌ಗಳು ಮತ್ತೊಮ್ಮೆ ಪದಕಕ್ಕೆ ಗುರಿಯಿಡುವ ಮೂಲಕ ಹೆಮ್ಮೆ ತಂದರು. ಏಷ್ಯನ್ ಗೇಮ್ಸ್ 2023 ಕೂಟದ 4ನೇ ದಿನ ಭಾರತ ಒಟ್ಟಾರೆ 8 ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರಲ್ಲಿ 2 ಚಿನ್ನ ಕೂಡ ಸಿಕ್ಕಿದ್ದು ವಿಶೇಷ.
ಇದನ್ನೂ ಓದಿ: ಪಿಸ್ತೂಲ್ ಟೀಮ್ ಇವೆಂಟ್‌ನಲ್ಲಿ ಚಿನ್ನಕ್ಕೆ ಗುರಿ – ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಸ್ವರ್ಣ
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಸರಬ್ಜೋತ್ ಸಿಂಗ್, ಶಿವ ನರ್ವಾಲ್ ಮತ್ತು ಅರ್ಜುನ್ ಸಿಂಗ್ ಚೀಮಾ ಅವರ ಪುರುಷರ ತಂಡ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಒಟ್ಟು 1734 ಸ್ಕೋರ್ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕೇವಲ ಒಂದು ಅಂಕಗಳ ಅಂತರದಲ್ಲಿ ಚೀನಾವನ್ನು ಸೋಲಿಸುವ ಮೂಲಕ ಭಾರತಕ್ಕೆ ಮತ್ತೊಂದು ಬಂಗಾರದ ಪದಕ ತಂದುಕೊಟ್ಟರು.
ಇನ್ನು ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಮಹಿಳೆಯರ 60Kg ವುಶು ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ರೋಶಿಬಿನಾ ಚೀನಾದ ಕ್ಸಿಯಾವೊಯಿ ವು ವಿರುದ್ಧ 0-2 ರಿಂದ ಸೋತ ನಂತರ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇದಕ್ಕೂ ಮೊದಲು ಏಷ್ಯನ್ ಗೇಮ್ಸ್ನಲ್ಲಿ ಭಾರತ ವುಶುನಲ್ಲಿ ಏಳು ಪದಕಗಳನ್ನು ಗೆದ್ದುಕೊಂಡಿತ್ತು, ಆದರೆ ಪ್ರತಿ ಬಾರಿಯೂ ಫೈನಲ್ನಲ್ಲಿ ಸೋತಿತ್ತು. 2010 ರಲ್ಲಿ, ಸಂಧ್ಯಾರಾಣಿ ದೇವಿ ವಾಂಗ್ಖೇಮ್ ವುಶುನಲ್ಲಿ ನಡೆದ ಏಷ್ಯನ್ ಗೇಮ್ಸ್ ಫೈನಲ್ನಲ್ಲಿ ಭಾಗವಹಿಸಿದ ಕೊನೆಯ ಭಾರತೀಯರಾಗಿದ್ದರು. ಇದೀಗ ರೋಶಿಬಿನಾ ದೇವಿ ಫೈನಲ್‌ನಲ್ಲಿ ಬಂಗಾರ ಗೆಲ್ಲಲು ವಿಫಲರಾದರು. ಆದರೆ, ಬೆಳ್ಳಿ ತಮ್ಮದಾಗಿಸಿದ್ದಾರೆ.