ಶಾಲೆ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರ ಜಿಲ್ಲಾಧಿಕಾರಿಗೆ ನೀಡಿದ ಶಿಕ್ಷಣ ಇಲಾಖೆ – ಆ್ಯಪ್ ಆಧಾರಿತ ಕ್ಯಾಬ್ ಗಳು ಶುಕ್ರವಾರ ರಸ್ತೆಗಿಳಿಯಲ್ಲ
ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಕನ್ನಡ ಪರ ಸಂಘಟನೆಗಳು ಶುಕ್ರವಾರ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಹೀಗಾಗಿ ಬಹುತೇಕ ಸೇವೆಗಳು ಸ್ತಬ್ಧಗೊಳ್ಳಲಿವೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ, ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಶಿಕ್ಷಣ ಇಲಾಖೆ ಜಿಲ್ಲಾಧಿಕಾರಿಗೆ ನೀಡಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ಶಿಕ್ಷಣ ಇಲಾಖೆಯಿಂದ ರಜೆ ಘೋಷಣೆ ಇಲ್ಲ. ಪರಿಸ್ಥಿತಿಯನ್ನು ಗಮನಿಸಿಕೊಂಡು ಜಿಲ್ಲಾಧಿಕಾರಿಗಳು ರಜೆ ನೀಡಬಹುದು ಎಂದು ಶಿಕ್ಷಣ ಇಲಾಖೆ ಮೌಖಿಕವಾಗಿ ಸೂಚಿಸಿದೆ.
ಇದನ್ನೂ ಓದಿ: ಸೆ. 29ರಂದು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸೇವೆ ಇರಲ್ಲ!
ಖಾಸಗಿ ಶಾಲೆಗಳ ಒಕ್ಕೂಟ ಕರ್ನಾಟಕ ಬಂದ್ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಶಾಲೆಗಳಿಗೆ ರಜೆ ನೀಡುವ ನಿರ್ಧಾರವನ್ನು ಆಯಾ ಶಾಲಾ ಆಡಳಿತ ಮಂಡಳಿಗೆ ಒಕ್ಕೂಟ ನೀಡಿದೆ. ಪರಿಸ್ಥಿತಿಗೆ ಅನುಗುಣವಾಗಿ ಶಾಲೆಗಳು ರಜೆ ನೀಡಬಹುದು. ಜಿಲ್ಲಾಧಿಕಾರಿಗಳು ರಜೆ ನೀಡುವ ನಿರ್ಧಾರ ತೆಗೆದುಕೊಳ್ಳುವಂತೆ ಖಾಸಗಿ ಶಾಲೆ ಸಂಘಟನೆಗಳು ಮನವಿ ಮಾಡಿವೆ.
ಆ್ಯಪ್ -ಆಧಾರಿತ ಕ್ಯಾಬ್ ಗಳು ಶುಕ್ರವಾರ ರಸ್ತೆಗಿಳಿಯಲ್ಲ
ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕ್ಯಾಬ್ ಗಳನ್ನು ರಸ್ತೆಗಿಳಿಸದೆ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಓಲಾ-ಊಬರ್ ಕ್ಯಾಬ್ ಚಾಲಕರ ಸಂಘದ ರಾಜ್ಯಾಧ್ಯಕ್ಷ ತನ್ವೀರ್ ಪಾಶಾ ಹೇಳಿದ್ದಾರೆ. ಶುಕ್ರವಾರದಂದು ಓಲಾ ಮತ್ತು ಊಬರ್ ಸಂಸ್ಥೆಗಳಿಗೆ ಸೇರಿದ ಸುಮಾರು 1 ಲಕ್ಷ 25 ಸಾವಿರ ಆಟೋಗಳು ಹಾಗೂ ಸುಮಾರು 50,000 ಕ್ಯಾಬ್ ಗಳು ಪಾರ್ಕ್ ಆದ ಸ್ಥಳಗಳಿಂದ ಕದಲುವುದಿಲ್ಲ. ಆ್ಯಪ್ -ಆಧಾರಿತ ಕ್ಯಾಬ್ ಗಳು ಶುಕ್ರವಾರ ರಸ್ತೆಗಿಳಿಯಲ್ಲ.