2 ಸಾವಿರ ಮುಖಬೆಲೆಯ ನೋಟು ಬದಲಾವಣೆಗೆ 3 ದಿನಗಳಷ್ಟೇ ಬಾಕಿ! – ಸೆ. 30 ಕೊನೆ ದಿನ
ಬೆಂಗಳೂರು: ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿತ್ತು. ಮೇ 23ರಿಂದ ಸೆಪ್ಟೆಂಬರ್ 30ರವರೆಗೂ ನೋಟುಗಳ ವಿನಿಮಯಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಲು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ.
ಆರ್ಬಿಐ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ತಿಳಿಸಿದ ಬೆನ್ನಲ್ಲೇ ಜನರು ಬ್ಯಾಂಕ್ನತ್ತ ಧಾವಿಸಿ ನೋಟುಗಳನ್ನು ಬದಲಾಯಿಸಿಕೊಂಡಿದ್ದಾರೆ. ನೋಟುಗಳನ್ನು ವಿನಿಮಯ ಮಾಡಲು ನೀಡಿದ್ದ ಗಡುವು ಮುಗಿಯುತ್ತಾ ಬಂದಿದ್ದು, 2000 ರೂ. ನೋಟುಗಳನ್ನು ಬಳಸುವವರು ಕಡಿಮೆಯಾಗಿದೆ. ಈ ಹಿಂದೆ ಕೂಡ ಚಿಲ್ಲರೆ ಸಮಸ್ಯೆ, ದೊಡ್ಡ ಮುಖಬೆಲೆಯ ನೋಟು ಎಂಬ ಕಾರಣಕ್ಕೆ ಇದರ ಬಳಕೆಗೆ ಹಿಂಜರಿಯುತ್ತಿದ್ದರು. ಆದರೆ ಇದೀಗ 2000 ಮುಖಬೆಲೆ ನೋಟ್ಗಳು ಚಲಾವಣೆ ನಿಲ್ಲಿಸುವ ಹಿನ್ನೆಲೆ ಮತ್ತಷ್ಟು ಬಳಕೆ ಕುಸಿದಿದೆ.
ಇದನ್ನೂ ಓದಿ: ಮಂತ್ರಾಲಯದ ರಾಯರ ಮಠಕ್ಕೆ ಹರಿದು ಬಂತು ಭರ್ಜರಿ ಕಾಣಿಕೆ! ಇತಿಹಾಸದಲ್ಲೇ ಮೊದಲ ಬಾರಿಗೆ ಗರಿಷ್ಠ ಆದಾಯ!
ನೋಟ್ ಹಿಂಪಡೆಯುವ ಬಗ್ಗೆ ಆರ್ಬಿಐ ಘೋಷಿಸಿದ ಆರಂಭದಲ್ಲಿ ಬ್ಯಾಂಕ್ಗಳಿಗೆ ಹಿಂತಿರುಗಿಸುವವರ ಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು. ಆದರೆ ಇದೀಗ ಹಿಂತಿರುಗಿಸುವವರ ಪ್ರಮಾಣದಲ್ಲಿ ಕುಸಿತವಾಗಿದೆ. ಇನ್ನು ಕೇವಲ ಮೂರು ದಿನ ಬಾಕಿ ಇರುವ ಹಿನ್ನೆಲೆ ಆದಷ್ಟು ಬೇಗ ನೋಟ್ ಬದಲಿಸಿಕೊಳ್ಳಬೇಕಿದೆ.
ಆರ್ಬಿಐ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ್ದ ನಂತರವೂ ಆರಂಭದಲ್ಲಿಸ್ವಲ್ಪಮಟ್ಟಿಗೆ 2000 ರೂ. ನೋಟು ಚಲಾವಣೆಯಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಸ್ಥಳೀಯವಾಗಿ 2000 ರೂ. ನೋಟುಗಳ ಚಲಾವಣೆ ಕಡಿಮೆಯಾಗಿತ್ತು. ಆದರೂ ಪೆಟ್ರೋಲ್ ಬ್ಯಾಂಕ್ ಸೇರಿದಂತೆ ಹೆಚ್ಚಿನ ವಹಿವಾಟು ನಡೆಯುವ ಕಡೆಗಳಲ್ಲಿ ಮಾತ್ರ 2000 ರೂ. ನೋಟು ಪಡೆಯುತ್ತಿದ್ದರು. ಆದರೆ ಕಳೆದ 15 ದಿನಗಳಿಂದ ಅದು ಬದಲಾಗಿದ್ದು, 2000 ನೋಟುಗಳ ಚಲಾವಣೆ ಬಹುತೇಕ ಕಾಣಿಸದಂತಾಗಿದೆ. ಸದ್ಯ ನೋಟು ಪಡೆಯಲು ಕೂಡ ಜನರು ಯೋಚನೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.