ರಾಜ್ಯ ಸರ್ಕಾರ ತಮಿಳುನಾಡಿನ ಏಜೆಂಟ್ನಂತೆ ವರ್ತಿಸುತ್ತಿದೆ – ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಿಡಿ
ಬೆಂಗಳೂರು: ರಾಜ್ಯದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ನಿರಂತರ ಪ್ರತಿಭಟನೆ ನಡೆಸುತ್ತಿವೆ. ಮಂಗಳವಾರ ಕೂಡ ಬೆಂಗಳೂರು ಬಂದ್ ಮಾಡಲಾಗಿತ್ತು. ಇವತ್ತು (ಬುಧವಾರ) ರಾಜಕೀಯ ಶತ್ರುಗಳಾಗಿ ಕಿತ್ತಾಡುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಬಿಜೆಪಿ ಮತ್ತು ಜೆಡಿಎಸ್ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಜಂಟಿಯಾಗಿ ಪ್ರತಿಭಟನೆ ನಡೆಸುತ್ತಿವೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಸರ್ಕಾರ ತಮಿಳುನಾಡಿನ ಏಜೆಂಟ್ನಂತೆ ವರ್ತಿಸುತ್ತಿದೆ. ಬರುವ ದಿನಗಳಲ್ಲಿ ನಾಡಿನ ಜನರ ಹಿತದೃಷ್ಟಿಯಿಂದ ಜೆಡಿಎಸ್-ಬಿಜೆಪಿ ಹೋರಾಟ ನಡೆಸುತ್ತಿದೆ. ನಿಮ್ಮ ರಾಜಕೀಯ ದೊಂಬರಾಟಕ್ಕೆ ಅವಕಾಶ ನೀಡಲ್ಲ. ಕರ್ನಾಟಕದಲ್ಲಿ ಮಳೆ ಮುಗಿದಿದೆ ಮತ್ತು ತಮಿಳುನಾಡಿನಲ್ಲಿ ಈಗ ಶುರುವಾಗಿದೆ. ಕಾವೇರಿ ಹೋರಾಟಕ್ಕೆ ಕುಮಾರಸ್ವಾಮಿ ಬಂದು ದೊಡ್ಡ ಶಕ್ತಿ ತಂದಿದ್ದಾರೆ. ವಾಸ್ತವ ಸ್ಥಿತಿಯನ್ನು ತಿಳಿದು ನೀರು ನಿಲ್ಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿಗಾಗಿ ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ, ಕುಮಾರಸ್ವಾಮಿ – ಬಿಜೆಪಿ, ಜೆಡಿಎಸ್ ನಿಂದ ಇಂದು ಪ್ರತಿಭಟನೆ
ಇದೇ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ರೈತರು ಪ್ರತಿ ದಿನ ಹೋರಾಟ ಮಾಡುತ್ತಿದ್ದಾರೆ. ಇವತ್ತು ಜಂಟಿಯಾಗಿ ಪ್ರತಿಭಟನೆ ಮಾಡ್ತಿರೋದು ರಾಜಕಾರಣಕ್ಕೆ ಅಲ್ಲ. ಸಿಎಂ ರಾಜಕೀಯಕ್ಕೆ ಬಳಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ. ಈಗಲೂ ಎಚ್ಚೆತ್ತುಕೊಳ್ಳುವ ಪರಿಜ್ಞಾನ ಸರ್ಕಾರಕ್ಕೆ ಇಲ್ಲ. ಸರ್ವಪಕ್ಷ ಸಭೆ ಕರೆದಾಗ ನಾವು ಹೇಳಿದ್ದನ್ನು ಇವರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಪ್ರತಿದಿನ 5 ಸಾವಿರ ಕ್ಯೂಸೆಕ್ ಹೇಳಿದರು. ಸುಪ್ರೀಂಕೋರ್ಟ್ ತೀರ್ಪು ಬರೋವರೆಗೂ ಕಾಯಬೇಕಿತ್ತು. 10 ರಿಂದ 15 ದಿನದ ನೀರನ್ನು ಉಳಿಸಿಕೊಳ್ಳಬಹುದಿತ್ತು. ನೀರಾವರಿ ಸಚಿವರಿಂದ ಬೆಂಗಳೂರಿನಲ್ಲಿ ವ್ಯವಹಾರ ಮಾಡೋಕೆ ಸಮಯ ಇಲ್ಲ. ಅಂತಹವರನ್ನ ನೀರಾವರಿ ಸಚಿವರನ್ನಾಗಿ ಮಾಡಿದ್ದಾರೆ. ಬೆಳಗ್ಗೆ ಪ್ರಾಧಿಕಾರದ ಸಭೆ ಇರುವಾಗ ಒಳಹರಿವು ಹೆಚ್ಚಾಗಿದೆ ಅಂತಾ ಜವಬ್ದಾರಿ ಸ್ಥಾನದಲ್ಲಿ ಇರೋರು ಹೇಳ್ತಾರಾ? ಮೆಟ್ಟೂರು ಜಲಾಶಯದಲ್ಲಿ ಒಳಹರಿವು, ಹೊರ ಹರಿವಿನ ಮಾಹಿತಿ ತರಿಸಿದ್ದೇನೆ. ಒಳಹರಿವು 6400 ಕ್ಯೂಸೆಕ್ ಇದೆ. ಕಳೆದ ಕೆಲ ದಿನ ಭಾಗಮಂಡಲದಲ್ಲಿ ಮಳೆ ಆಗಿದ್ದಕ್ಕೆ ಸ್ವಲ್ಪನೀರು ಬರ್ತಿದೆ. ಸ್ಥಳ ಪರಿಶೀಲನೆಗೆ ಹೋಗ್ತಿಲ್ಲ. ನೀರಾವರಿ ಸಚಿವರ ಹೇಳಿಕೆ ಮತ್ತಷ್ಟು ಮಾರಕ ಆಗಲಿದೆ. ಲಘುವಾದ ನಡವಳಿಕೆಯಿಂದ ಮುಂದಿನ ದಿನದಲ್ಲಿ ಸಮಸ್ಯೆ ಆಗಲಿದೆ ಎಂದು ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಪ್ರತಿಭಟನೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಡಿವಿ ಸದಾನಂದ ಗೌಡ, ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷರು, ಮಾಜಿ ಸಚಿವರಾದ ಮುನಿರತ್ನ, ಅಶ್ವಥ್ ನಾರಾಯಣ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಮುನಿರಾಜು, ಸಿಕೆ ರಾಮಮೂರ್ತಿ ಹಾಗೂ ಜೆಡಿಎಸ್ ಎಂಎಲ್ಸಿ ಗೋವಿಂದರಾಜು, ಜೆಡಿಎಸ್ ಶಾಸಕ ಎ.ಮಂಜು, ಮುಖಂಡರಾದ ಶ್ರೀಕಂಠೇಗೌಡ, ಶರವಣ ಸೇರಿದಂತೆ ಉಭಯ ಪಕ್ಷಗಳ ನಾಯಕರು ಪ್ರತಿಭಟನೆಯ ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.