ಕರ್ನಾಟಕ ಬಂದ್ ಗೆ 104 ಸಂಘಟನೆಗಳ ಬೆಂಬಲ – ಶುಕ್ರವಾರ ಹೆದ್ದಾರಿಗಳನ್ನ ಬಂದ್ ಮಾಡಲು ತೀರ್ಮಾನ
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನ ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ. ಮಂಗಳವಾರ ಬೆಂಗಳೂರು ಬಂದ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಬೆಂಗಳೂರು ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ಶುಕ್ರವಾರ ಅಖಂಡ ಕರ್ನಾಟಕ ಬಂದ್ ಮಾಡಲು ಕರೆ ನೀಡಲಾಗಿದೆ. ಈ ಮೂಲಕ ಒಂದೇ ವಾರದಲ್ಲಿ ಕರ್ನಾಟಕದಲ್ಲಿ ಕಾವೇರಿ ವಿಚಾರವಾಗಿ ಎರಡೆರಡು ಬಂದ್ ಆಗಲಿವೆ.
ಬೆಂಗಳೂರು ಬಂದ್ ಬಳಿಕ ಇದೀಗ ಶುಕ್ರವಾರ ಮತ್ತೆ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ. ರಾಜ್ಯದ ಹಿತಕ್ಕಾಗಿ ಸೆಪ್ಟೆಂಬರ್ 29 ಶುಕ್ರವಾರ ಕರ್ನಾಟಕ ಬಂದ್ ಮಾಡಲು ತೀರ್ಮಾನಿಸಲಾಗಿದೆ ಅಂತಾ ಕನ್ನಡ ಒಕ್ಕೂಟ ಸಂಘಟನೆಗಳು ಘೋಷಿಸಿವೆ. ನಿರೀಕ್ಷೆಗೂ ಮೀರಿ ಬೆಂಗಳೂರು ಬಂದ್ಗೆ ಬೆಂಗಳೂರಿಗರು ಜೈ ಎಂದಿದ್ರು. ಇದೇ ರೀತಿ ಅಥವಾ ಇದಕ್ಕೂ ಹೆಚ್ಚಿನ ಯಶಸ್ಸು ಕರ್ನಾಟಕ ಬಂದ್ಗೆ ಸಿಗಬೇಕು ಎನ್ನುವ ಲೆಕ್ಕಾಚಾರದಲ್ಲಿ ಕನ್ನಡ ಒಕ್ಕೂಟದ ಪ್ರಮುಖರು ಅಖಾಡಕ್ಕಿಳಿದಿದ್ದಾರೆ. ಒಂದೇ ವಾರದಲ್ಲಿ ಎರಡೆರಡು ದಿನ ಬಂದ್ ಮಾಡೋದಕ್ಕೆ ಈ ಹಿಂದೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಮಂಗಳವಾರವೇ ಕರ್ನಾಟಕ ಬಂದ್ ಕೂಡಾ ಮಾಡಬಹುದಲ್ಲವೇ ಎಂಬ ವಾದಗಳೂ ಇದ್ದವು. ಆದರೆ ಮಂಗಳವಾರ ಬೆಂಗಳೂರು ಬಂದ್ ಹಾಗೂ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಾತ್ರ ಬಂದ್ ವಾತಾವರಣ ಕಂಡುಬಂದಿತ್ತು. ಇನ್ನು ಶುಕ್ರವಾರ ಸಂಪೂರ್ಣ ಕರ್ನಾಟಕ ಬಂದ್ ಆಗಲಿದೆ.
ಬೆಂಗಳೂರು ಬಂದ್ ಗೆ ಬೆಂಬಲ ನೀಡಿದ್ದ ಕೆಲವು ಸಂಘಟನೆಗಳು ಕಡೇ ಕ್ಷಣದಲ್ಲಿ ವಾಪಾಸ್ ಪಡೆದು ಕನ್ನಡ ಒಕ್ಕೂಟ ಕರೆ ಕೊಟ್ಟಿರುವ ಕರ್ನಾಟಕ ಬಂದ್ಗೆ ಬೆಂಬಲವನ್ನ ಘೋಷಿಸಿದ್ದವು. ಹೋಟೆಲ್ ಅಸೋಸಿಯೇಷನ್, ಖಾಸಗಿ ವಾಹನ ಮಾಲೀಕರ ಸಂಘಟನೆಗಳು, ಒಲಾ ಊಬರ್ ಸಂಘಟನೆಗಳು ಕರ್ನಾಟಕ ಬಂದ್ ಗೆ ಸಪೋರ್ಟ್ ಮಾಡಿದ್ರು. ಇದೀಗ ಕರ್ನಾಟಕ ಬಂದ್ ಗೆ 104 ಸಂಘಟನೆಗಳು ಬೆಂಬಲ ಘೋಷಿಸಿಕೊಂಡಿವೆ. ಓಲಾ ಉಬರ್ ಚಾಲಕರ ಸಂಘ, ಆದರ್ಶ ಆಟೋ ಯೂನಿಯನ್, ಕರ್ನಾಟಕ ಕೈಗಾರಿಕೆಗಳ ಸಂಘ, ಕರ್ನಾಟಕ ರಸ್ತೆ ಸಾರಿಗೆ ಕ್ರಿಯಾ ಸಮಿತಿ, ವಿದ್ಯಾರ್ಥಿ ಸಂಘಟನೆಗಳು, ಮಾರುಕಟ್ಟೆ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ..?, ಜಲಮಂಡಳಿ ನೌಕರರ ಸಂಘ, ಲಾರಿ ಮಾಲೀಕರ ಸಂಘ, ಹೋಟೆಲ್ ಅಸೋಸಿಯೇಷನ್ ಬೆಂಬಲ ಘೋಷಿಸಿವೆ. ಒಟ್ಟಿನಲ್ಲಿ ಅಖಂಡ ಕರ್ನಾಟಕ ಬಂದ್ ಗೆ ಸಾಕಷ್ಟು ಸಂಘಟನೆಗಳು ಸಾಥ್ ನೀಡಲಿವೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಅಖಂಡ ಕರ್ನಾಟಕ ಬಂದ್ ಗೆ ತಯಾರಿ ನಡೆಸುತ್ತಿದ್ದು, ಸದ್ಯ 80 ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಗೆ ಸಂಪೂರ್ಣ ಬೆಂಬಲ ಸಿಕ್ಕಿದೆ.
ಅಷ್ಟೇ ಅಲ್ಲದೆ ಕರ್ನಾಟಕ ಬಂದ್ ವೇಳೆ ಹೆದ್ದಾರಿಗಳನ್ನ ತಡೆಯಲು ಪ್ಲ್ಯಾನ್ ಸಿದ್ಧವಾಗಿದೆ. ಯಾವ್ಯಾವ ಹೆದ್ದಾರಿಗಳು ಬಂದ್ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ
* ತಮಿಳುನಾಡು ಗಡಿ ಅತ್ತಿಬೆಲೆ ಹೆದ್ದಾರಿ ಬಂದ್
* ಆಂಧ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸೋ ಹೈವೇ ಬಂದ್
* ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ
* ಮೈಸೂರು- ಬೆಂಗಳೂರು ರಸ್ತೆ ಕೆಂಗೇರಿ ಬಳಿ ಬಂದ್
* ಬೆಂಗಳೂರು- ಮಂಗಳೂರು ಹೈವೇ ನೆಲಮಂಗಲ ಜಂಕ್ಷನ್
* ಬೆಂಗಳೂರು-ತುಮಕೂರು ಹೆದ್ದಾರಿ ನವಯುಗ ಟೋಲ್
* ಕನಕಪುರ- ಬೆಂಗಳೂರು ಹೆದ್ದಾರಿ ಕೋಣನಕುಂಟೆ ಬಳಿ ಬಂದ್
* ಮೈಸೂರು, ಮಂಡ್ಯ, ರಾಮನಗರ ಸೇರಿ ಪ್ರಮುಖ ಭಾಗದಲ್ಲಿ ಹೆದ್ದಾರಿ ತಡೆಗೆ ಪ್ಲಾನ್
* ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನ ಬಂದ್ ಮಾಡೋ ಬಗ್ಗೆ ಚಿಂತನೆ
ಒಟ್ಟಾರೆ 104 ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಬೆಂಬಲ ಘೋಷಿಸಿಕೊಂಡಿವೆ. ಕಾವೇರಿ ವಿಚಾರವನ್ನ ತುಂಬಾ ಗಂಭೀರವಾಗಿ ಪರಿಗಣಿಸಿರುವ ಹಿನ್ನೆಲೆ ಶುಕ್ರವಾರವೂ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಗುವ ಸಾಧ್ಯತೆಯಿದೆ.