ಕಾವೇರಿಗಾಗಿ ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ, ಕುಮಾರಸ್ವಾಮಿ – ಬಿಜೆಪಿ, ಜೆಡಿಎಸ್ ನಿಂದ ಇಂದು ಪ್ರತಿಭಟನೆ
ಬೆಂಗಳೂರು: ರಾಜಕೀಯ ಶತ್ರುಗಳಾಗಿ ಕಿತ್ತಾಡುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಹೆಚ್ಡಿ ಕುಮಾರಸ್ವಾಮಿ ಇಂದು (ಬುಧವಾರ) ಒಂದೇ ವೇದಿಕೆಯಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜೆಡಿಎಸ್ ಜಂಟಿ ಹೋರಾಟ ನಡೆಸುತ್ತಿದೆ.
ಇದನ್ನೂ ಓದಿ: ಕಾವೇರಿ ಕಿಚ್ಚು ಹೆಚ್ಚಾದ ಹೊತ್ತಲ್ಲೇ ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶ!
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಸದಾನಂದಗೌಡ ಸೇರಿದಂತೆ 2 ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಏರ್ಪಟ್ಟ ಬಳಿಕ ಮೊದಲ ಬಾರಿಗೆ ಎರಡು ಒಟ್ಟಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, ಜೆಡಿಎಸ್ ಈಗ ಹೋರಾಟಗಳ ಮೂಲಕ ದೋಸ್ತಿ ಸಂದೇಶವನ್ನು ತಮ್ಮ ಪಕ್ಷಗಳ ಕಾರ್ಯಕರ್ತರಿಗೆ ರವಾನಿಸಲು ಮುಂದಾಗಿವೆ. ಇದರಿಂದಾಗಿ ಮೈತ್ರಿ ಇನ್ನಷ್ಟು ಗಟ್ಟಿಗೊಳ್ಳುವ ನಿರೀಕ್ಷೆ ಇದೆ.