ಏಕದಿನ ವಿಶ್ವಕಪ್ ಟೂರ್ನಿಯಿಂದ ಅಕ್ಷರ್ ಪಟೇಲ್ ಹೊರಕ್ಕೆ? – ಆರ್.ಅಶ್ವಿನ್ಗೆ ಸಿಗುತ್ತಾ ಚಾನ್ಸ್?
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 5 ರಂದು ಭಾರತದ ಆತಿಥ್ಯದಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಗಾಯದ ಸಮಸ್ಯೆ ಕಾರಣ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಆಲ್ರೌಂಡರ್ ಅಕ್ಷರ್ ಪಟೇಲ್ ವಿಶ್ವಕಪ್ ಟೂರ್ನಿಯಲ್ಲೂ ಆಡುವುದು ಅನುಮಾನ ಎನ್ನಲಾಗುತ್ತಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದು ಬೀಗಿದ ಟೀಮ್ ಇಂಡಿಯಾ – ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ
ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಯುವ ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ ಚೇತರಿಸಿಕೊಳ್ಳದಿದ್ದರೆ, ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಟೀಮ್ ಇಂಡಿಯಾದ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕೆಂದು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಸಲಹೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ 7 ಓವರ್ ಗಳಲ್ಲಿ 3 ವಿಕೆಟ್ ಪಡೆದು ತಮ್ಮ ಫಿಟ್ನೆಸ್ ಸಾಬೀತುಪಡಿಸಿರುವ ಆರ್. ಅಶ್ವಿನ್ ಅವರನ್ನು ಗಾಯಗೊಂಡಿರುವ ಅಕ್ಷರ್ ಪಟೇಲ್ ಬದಲಿಗೆ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಸಂಜಯ್ ಬಾಂಗರ್ ಸಲಹೆ ನೀಡಿದ್ದಾರೆ. ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಅಕ್ಷರ್ ಪಟೇಲ್ ಸಂಪೂರ್ಣವಾಗಿ ಫಿಟ್ನೆಸ್ ಪಡೆಯದಿದ್ದರೆ, ತಂಡದಲ್ಲಿ ಸ್ಥಾನ ಪಡೆಯುವುದು ಕಠಿಣವಾದ ಸಂಗತಿ ಆಗುತ್ತದೆ. ಆದ್ದರಿಂದ ಆರ್.ಅಶ್ವಿನ್ ಗೆ ಸ್ಥಾನ ಕಲ್ಪಿಸುವುದು ಸೂಕ್ತ. ಟೆಸ್ಟ್ ಸ್ವರೂಪದಲ್ಲಿ ಅಶ್ವಿನ್, ಒಡಿಐಗಿಂತ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ ಅವಶ್ಯಕತೆ ಬಿದ್ದಾಗ 8ನೇ ಕ್ರಮಾಂಕದಲ್ಲಿ ಅವರು ಬ್ಯಾಟ್ ಬೀಸಬಲ್ಲರು,” ಎಂದು ಮಾಜಿ ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.
ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಈಗಾಗಲೇ ಬಲಿಷ್ಠ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದು, ಯುಜ್ವೇಂದ್ರ ಚಹಲ್, ರವಿಚಂದ್ರನ್ ಅಶ್ವಿನ್, ಶಿಖರ್ ಧವನ್ ಸೇರಿದಂತೆ ಹಲವು ಆಟಗಾರರನ್ನು ಕೈಬಿಡಲಾಗಿದೆ. ಸ್ಪಿನ್ ಸ್ನೇಹಿ ಪಿಚ್ ಗಳಲ್ಲಿ ಹೆಚ್ಚಿನ ಪಂದ್ಯಗಳು ನಡೆಯಲಿದ್ದು, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಹಾಗೂ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರಿಗೆ ಸ್ಪಿನ್ನರ್ ಗಳ ರೂಪದಲ್ಲಿ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಏಷ್ಯಾಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಸೂಪರ್-4 ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾದ ಅಕ್ಷರ್ ಪಟೇಲ್, ಉಳಿದ ಪಂದ್ಯದಿಂದ ದೂರ ಉಳಿದಿದ್ದರು. ಅವರ ಜಾಗದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಶ್ರೀಲಂಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಆಡಿಸಲಾಗಿತ್ತು. ಪ್ರಸಕ್ತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಅಕ್ಷರ್ ಪಟೇಲ್ ಅಲಭ್ಯರಾಗಿದ್ದಾರೆ.