ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕದಿಂದ ಮತ್ತೊಂದು ದೊಡ್ಡ ಸಾಧನೆ – ಕ್ಷುದ್ರಗ್ರಹದಿಂದ ಮಣ್ಣು ತಂದ ನಾಸಾ
ಚಂದ್ರನ ಅಂಗಳದಲ್ಲಿ ಸಾಫ್ಟ್ ಲ್ಯಾಂಡ್ ಮಾಡುವ ಭಾರತ ಚಂದ್ರಯಾನ ಯಶಸ್ಸಿನ ಖುಷಿಯಲ್ಲಿದೆ. ಇಡೀ ಜಗತ್ತೇ ಈ ಬಗ್ಗೆ ಮಾತನಾಡುತ್ತಿದೆ. ಇದರ ನಡುವೆಯೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಸದ್ದಿಲ್ಲದೆ ಮಹತ್ವದ ಸಾಧನೆಯೊಂದನ್ನ ಮಾಡಿದೆ. ಏಳು ವರ್ಷಗಳ ಕಾಲ ಅಂತರಿಕ್ಷದಲ್ಲಿ ಪ್ರಯಾಣಿಸಿದ ಅಮೆರಿಕದ ನಾಸಾ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ನೌಕೆಯು ‘ಬೆನ್ನು’ ಎಂಬ ದೊಡ್ಡ ಕ್ಷುದ್ರಗ್ರಹವೊಂದರ ಮಾದರಿ ಸಂಗ್ರಹಿಸಿ ಯಶಸ್ವಿಯಾಗಿ ಯೂಟಾ ಮರುಭೂಮಿಯಲ್ಲಿ (Utah desert) ಸಾಫ್ಟ್ ಲ್ಯಾಂಡ್ ಆಗಿದೆ. 2016ರಲ್ಲಿ ನಾಸಾ (NASA) ಹಾರಿಬಿಟ್ಟಿದ್ದ ‘ಒಸಿರಿಸ್-ರೆಕ್ಸ್’ ನೌಕೆಯು (Osiris-Rex spacecraft) ಬೆನ್ನು ಕ್ಷುದ್ರಗ್ರಹದಿಂದ ಹೆಚ್ಚುಕಮ್ಮಿ 250 ಗ್ರಾಂ ತೂಕದ ಮಾದರಿಯನ್ನು ಸಂಗ್ರಹಿಸಿ, ತನ್ನ ಕ್ಯಾಪ್ಸೂಲ್ ಮೂಲಕ ಭೂಮಿಗೆ ಕಳುಹಿಸಿದೆ. ಆ ಕ್ಯಾಪ್ಸೂಲ್ ಸೆ.24ರಂದು ಯೂಟಾ ಮರುಭೂಮಿಯಲ್ಲಿ ಇಳಿದಿದೆ. ಅದರೊಳಗಿರುವ ಪೆಟ್ಟಿಗೆಯಲ್ಲಿ ಬೆನ್ನು ಕ್ಷುದ್ರಗ್ರಹದಿಂದ ಸಂಗ್ರಹಿಸಿ ತಂದ ಕಲ್ಲು-ಮಣ್ಣು ರೂಪದ ಮಾದರಿಯಿದೆ.
ಇದನ್ನೂ ಓದಿ : 2023ರ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿ ಬಿಡುಗಡೆ – ಅಮೆರಿಕ ಫಸ್ಟ್.. ಭಾರತಕ್ಕೆ ಎಷ್ಟನೇ ಸ್ಥಾನ?
ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮೈಲುಗಲ್ಲು ಬರೆದಿರುವ ನಾಸಾ, ‘ಬೆನ್ನು’ ಎಂಬ ದೊಡ್ಡ ಕ್ಷುದ್ರಗ್ರಹವೊಂದರ ಮಾದರಿ ಸಂಗ್ರಹಿಸಿ ಯಶಸ್ವಿಯಾಗಿ ಯೂಟಾ ಮರುಭೂಮಿಯಲ್ಲಿ (Utah desert) ಸಾಫ್ಟ್ ಲ್ಯಾಂಡ್ ಆಗಿದೆ. ಒಸಿರಿಸ್-ರೆಕ್ಸ್ ನೌಕೆಯು ಸಂಗ್ರಹಿಸಿ ತಂದಿರುವ ಕ್ಷುದ್ರಗ್ರಹದ (asteroid) ಮಾದರಿಯು ಈವರೆಗೆ ಮನುಷ್ಯನು ಯಾವುದೇ ಕ್ಷುದ್ರಗ್ರಹದಿಂದ ತಂದ ಅತಿದೊಡ್ಡ ಮಾದರಿಯಾಗಿದೆ. ಈ ಹಿಂದೆ ಜಪಾನ್ನ ಅಂತರಿಕ್ಷ ನೌಕೆಯು (Japanese spacecraft) ಕ್ಷುದ್ರಗ್ರಹದಿಂದ ಒಂದು ಟೀ ಸ್ಪೂನ್ನಷ್ಟು ಮಾದರಿಯನ್ನು ಸಂಗ್ರಹಿಸಿ ತಂದಿತ್ತು. ಈಗ ನಾಸಾ ತಂದಿರುವ ಮಾದರಿಯನ್ನು ಅಮೆರಿಕವು ಮೊದಲೇ ಕೊಟ್ಟ ಮಾತಿನಂತೆ ಜಗತ್ತಿನ 60 ಪ್ರಯೋಗಾಲಯಗಳ (60 laboratories) 200 ವಿಜ್ಞಾನಿಗಳ (200 scientists) ಜೊತೆ ಹಂಚಿಕೊಳ್ಳಲಿದೆ. ಅವರು ಬೆನ್ನು ಕ್ಷುದ್ರಗ್ರಹದ ಉಗಮ, ತನ್ಮೂಲಕ ಸೌರವ್ಯವಸ್ಥೆಯ ಹುಟ್ಟು, ಅದರಲ್ಲಿ ಭೂಮಿಯು ಹೇಗೆ ಮನುಷ್ಯನ ವಾಸಕ್ಕೆ ಯೋಗ್ಯವಾಗಿ ರೂಪುಗೊಂಡಿತು, ಬೆನ್ನು ಕ್ಷುದ್ರಹವು ಮುಂದೆ ಭೂಮಿಗೆ ಅಪ್ಪಳಿಸಿದರೆ ಆಗಬಹುದಾದ ಅಪಾಯ, ಅದನ್ನು ತಪ್ಪಿಸಲು ಕೈಗೊಳ್ಳಬೇಕಾದ ಕ್ರಮಗಳು ಮುಂತಾದ ಸಂಗತಿಗಳ ಬಗ್ಗೆ ಅಧ್ಯಯನ ನಡೆಸಲಿದ್ದಾರೆ. ಬೆನ್ನು ಕ್ಷುದ್ರಗ್ರಹದಿಂದ ತಂದ ಮಾದರಿಯನ್ನು ನಾಸಾ ವಿಜ್ಞಾನಿಗಳು ಅ.11ರಂದು ಜನರಿಗೆ ತೋರಿಸಿ, ಅದರ ಬಗ್ಗೆ ಆರಂಭಿಕ ಮಾಹಿತಿ ನೀಡಲಿದ್ದಾರೆ.
ಒಸಿರಿಸ್-ರೆಕ್ಸ್ ನೌಕೆಯು ಭಾನುವಾರ ಬೆಳಗ್ಗೆ ಭೂಮಿಯಿಂದ ಸುಮಾರು 1 ಲಕ್ಷ ಕಿ.ಮೀ. ದೂರದಲ್ಲಿ ಬೆನ್ನು ಕ್ಷುದ್ರಗ್ರಹದ ಮಾದರಿಯನ್ನು ಹೊತ್ತ ಕ್ಯಾಪ್ಸೂಲನ್ನು ಬಿಡುಗಡೆ ಮಾಡಿತು. ಅದು ಭೂಮಿಯತ್ತ ಗಂಟೆಗೆ 27,000 ಮೈಲು ವೇಗದಲ್ಲಿ ನುಗ್ಗಿಬಂತು. ಒಟ್ಟು ನಾಲ್ಕು ತಾಸು ಪ್ರಯಾಣಿಸಿ, ಲ್ಯಾಂಡ್ ಆಗುವುದಕ್ಕಿಂತ 13 ನಿಮಿಗಳ ಮೊದಲು ಭೂಮಿಯ ವಾತಾವರಣ ಪ್ರವೇಶಿಸಿತು. ಆಗ ಅದರ ಉಷ್ಣತೆ 2760 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿದ್ದಂತೆ ಅದಕ್ಕೆ ಜೋಡಿಸಿದ್ದ ಪ್ಯಾರಾಶೂಟ್ಗಳು ಬಿಚ್ಚಿಕೊಂಡು, ಕ್ಯೂಪ್ಸೂಲ್ನ ವೇಗವನ್ನು ಗಂಟೆಗೆ 11 ಮೈಲಿಗೆ ತಗ್ಗಿಸಿದವು. ಬಳಿಕ ಅದು ಮರುಭೂಮಿಯ ಮೇಲೆ ಮೆತ್ತಗೆ ಬಿದ್ದಿತು. ಇದು ಅತ್ಯಂತ ಕಷ್ಟದ ಲ್ಯಾಂಡಿಂಗ್ ಪ್ರಕ್ರಿಯೆ ಎನ್ನಲಾಗಿದ್ದು, ಜಗತ್ತಿನಾದ್ಯಂತ ವಿಜ್ಞಾನಿಗಳು ಕುತೂಹಲದಿಂದ ವೀಕ್ಷಿಸುತ್ತಿದ್ದರು.