ಕಾವೇರಿ ನೀರಿಗಾಗಿ ಬೆಂಗಳೂರು ಬಂದ್ – ಕುರುಬೂರು ಶಾಂತಕುಮಾರ್ ಪೊಲೀಸ್ ವಶಕ್ಕೆ
ಬೆಂಗಳೂರು: ಬೆಂಗಳೂರು ಬಂದ್ ಗೆ ಕರೆ ಕೊಟ್ಟಿದ್ದ ರೈತ ನಾಯಕನನ್ನು ಇಂದು ಬೆಳಗ್ಗೆಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ತಯಾರಿ ನಡೆಸಿದ್ದ ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ರೈತ ಮುಖಂಡರನ್ನು ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು.
ಇದನ್ನೂ ಓದಿ: ಕಾವೇರಿದ ಕಾವೇರಿ ಕಿಚ್ಚು.. ಹೇಗಿದೆ ಬೆಂಗಳೂರು ಬಂದ್?
ಟೌನ್ ಹಾಲ್ನಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಅವಕಾಶ ಕೊಡದೇ ನೇರವಾಗಿ ಫ್ರೀಡಂ ಪಾರ್ಕ್ಗೆ ಪ್ರತಿಭಟನಾಕಾರರನ್ನು ಕರೆದೊಯ್ಯಲಾಗಿದೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತಕುಮಾರ್, ಪೊಲೀಸರು ಗೂಂಡಾಗಿರಿ ಮೂಲಕ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನ ಜನತೆ ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರೂ ಬೀದಿಗಿಳಿಯಬೇಕು. ಸರ್ಕಾರಕ್ಕೆ ಸರಿಯಾದ ಪಾಠವನ್ನು ಕಲಿಸಬೇಕು. ಕರ್ನಾಟಕದ ರೈತರು ನಮಗೆ ಬೆಂಬಲ ನೀಡಿ ರಸ್ತೆಗಿಳಿಯಬೇಕು ಎಂದು ಮನವಿ ಮಾಡಿಕೊಂಡರು.
ಇನ್ನು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಓರ್ವ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಟವಲ್ನಿಂದ ಮರಕ್ಕೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ತಡೆದು ವಶಕ್ಕೆ ಪಡೆದಿದ್ದಾರೆ.
ಫ್ರೀಡಂಪಾರ್ಕ್ನಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ನಡೆಸುತ್ತಿವೆ. ಧರಣಿ ವೇಳೆ ಓರ್ವ ಕನ್ನಡಪರ ಹೋರಾಟಗಾರ ಕುಸಿದುಬಿದ್ದಿದ್ದಾರೆ. ಅಸ್ವಸ್ಥಗೊಂಡ ಕಾರ್ಯಕರ್ತನನ್ನು ತಕ್ಷಣವೇ ಪೊಲೀಸರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಫ್ರೀಡಂ ಪಾರ್ಕ್ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸುಮಾರು ಐನೂರಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ನಾಲ್ಕು ಕೆಎಸ್ಆರ್ಪಿ ತುಕಡಿ, ಒಂದು ಅಗ್ನಿಶಾಮಕ ವಾಹನ, ಒಂದು ವಾಟರ್ ಜೆಟ್ ನಿಯೋಜನೆ ಮಾಡಲಾಗಿದೆ.
ಬೆಂಗಳೂರು ಬಂದ್ಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಸಿನಿಮಾ ಶೂಟಿಂಗ್ ಬಂದ್ ಆಗಿದೆ. ಅಲ್ಲದೇ ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಸ್ಥಗಿತ ಮಾಡಲಾಗಿದೆ. ಬಂದ್ ಗೆ ಬೆಂಬಲ ನಗರದಲ್ಲಿ ಇವತ್ತು ಚಿತ್ರಮಂದಿರಗಳಲ್ಲಿ ಇಂದು ಸಿನಿಮಾ ಪ್ರದರ್ಶನವಿಲ್ಲ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಟೆಲಿವಿಷನ್ ಅಸೋಸಿಯೇಷನ್ ಕೋಡ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಸೀರಿಯಲ್ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಗಳು ನಡೆಯುತ್ತಿಲ್ಲ.