₹1,500 ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನ ಬೆತ್ತಲೆಗೊಳಿಸಿ ಹಲ್ಲೆ – ಮೂತ್ರ ಕುಡಿಸಿ ವಿಕೃತಿ ಮೆರೆದ ಪಾಪಿಗಳು
ಬಡ್ಡಿಗೆ ಸಾಲ ಪಡೆದವರಿಗೆ ಅದರ ಬಡ್ಡಿ ಕಟ್ಟಿಯೇ ಸಾಕಾಗುತ್ತದೆ. ಅಸಲಿಗಿಂತ ಬಡ್ಡಿ, ಚಕ್ರಬಡ್ಡಿ ಸೇರಿಸಿ ಸಾಲ ಕೊಟ್ಟವರು ಹಣ ಪಡೆದವರಿಗೆ ಕಿರುಕುಳ ಕೊಡುತ್ತಾರೆ. ಬಿಹಾರದಲ್ಲೂ ಬಡ್ಡಿಗೆ ಹಣ ಕೊಟ್ಟಿದ್ದ ಪಾಪಿಗಳು ಬಡ್ಡಿ ಕಟ್ಟಿಲ್ಲ ಎಂದು ಮೃಗೀಯವಾಗಿ ವರ್ತಿಸಿದ್ದಾರೆ. ಮಾತ್ರವಲ್ಲದೆ ಮಹಿಳೆ ಮೇಲೆ ಹಲ್ಲೆ ನಡೆಸಿ ಆಕೆಯನ್ನ ವಿವಸ್ತ್ರಗೊಳಿಸಿ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ.
ಇದನ್ನೂ ಓದಿ : 2023ರ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳ ಪಟ್ಟಿ ಬಿಡುಗಡೆ – ಅಮೆರಿಕ ಫಸ್ಟ್.. ಭಾರತಕ್ಕೆ ಎಷ್ಟನೇ ಸ್ಥಾನ?
ಬಿಹಾರದ ಪಾಟ್ನಾ ಜಿಲ್ಲೆಯಲ್ಲೇ ಇಂಥಾದ್ದೊಂದು ಹೇಯ ಕೃತ್ಯ ನಡೆದಿದೆ. 9,000 ರೂ. ಸಾಲಕ್ಕೆ 1,500 ರೂ. ಬಡ್ಡಿಯನ್ನು ಪಾವತಿಸಲು ವಿಫಲವಾದ ಕಾರಣ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ಆಕೆಯನ್ನ ವಿವಸ್ತ್ರಗೊಳಿಸಿ ಮೂತ್ರ ಕುಡಿಸಿದ್ದಾರೆ. ಹಲ್ಲೆಯಿಂದ ಮಹಿಳೆಯ ತಲೆಗೆ ಗಾಯವಾಗಿದ್ದು, ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 2 ವರ್ಷದ ಹಿಂದೆ ದಲಿತ ಮಹಿಳೆಯ ಗಂಡ 9,000 ರೂ ಸಾಲವನ್ನ ಪಡೆದುಕೊಂಡಿದ್ದರು. ಆ ಹಣವನ್ನು ಕೆಲ ದಿನಗಳಲ್ಲೇ ವಾಪಸ್ ನೀಡಲಾಗಿತ್ತು. ಆದರೆ ಆ ಹಣಕ್ಕೆ ವಿಪರೀತ ಬಡ್ಡಿ ಹಾಕಿ ಪಾವತಿಸುವಂತೆ ಆಕೆಗೆ ಕಿರುಕುಳ ನೀಡಲಾಗಿತ್ತು. ಆದರೆ ಮನೆಯ ಬಡತನ, ತಾಪತ್ರಯದ ಕಾರಣ ಆಕೆಗೆ ಹಣ ಪಾವತಿಸಲು ಆಗಿರಲಿಲ್ಲ. ಆಗ ದುಡ್ಡು ಕೊಟ್ಟ ಆರೋಪಿಗಳು ಬಡ್ಡಿ ಮೇಲೆ ಬಡ್ಡಿ ಏರಿಸಿ ಹಣ ದುಪ್ಪಟ್ಟು ಪಾವತಿಸುವಂತೆ ಕಿರುಕುಳ ನೀಡಿದ್ದಾರೆ. ಆಕೆ ಪಾವತಿಸದಿದ್ದಾಗ ಆಕೆಯ ಮನೆಗೆ ಬಂದು ಹಲ್ಲೆಗೈದು ವಿವಸ್ತ್ರಗೊಳಿಸಿ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದ ಖುಸ್ರುಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊಸಿಂಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶನಿವಾರ ತಡರಾತ್ರಿ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿದ ರೌಡಿಗಳು ಆಕೆಗೆ ಮೂತ್ರ ಕುಡಿಸಿದ್ದರು ಎಂದು ತಿಳಿದು ಬಂದಿದೆ. ಸದ್ಯ ಗಾಯಾಳು ಮಹಿಳೆ ಖುಸ್ರುಪುರ ಪಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣ ಸಂಬಂಧ ಗ್ರಾಮದ ಪ್ರಮೋದ್ ಕುಮಾರ್ ಸಿಂಗ್, ಆತನ ಪುತ್ರ ಪಿಯೂಷ್ ಕುಮಾರ್ ಸಮಯ್ ಮತ್ತು ಇತರ ಮೂರ್ನಾಲ್ಕು ಜನರ ವಿರುದ್ಧ ಸಂತ್ರಸ್ತ ಮಹಿಳೆ ಖುಸ್ರುಪುರ್ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯನ್ನು ಘಟನೆಯ ಬಗ್ಗೆ ವಿಚಾರಿಸಿದಾಗ, ಎರಡು ವರ್ಷಗಳ ಹಿಂದೆ ತನ್ನ ಪತಿ ಗ್ರಾಮದ ಪ್ರಮೋದ್ ಕುಮಾರ್ ಸಿಂಗ್ ಅವರಿಂದ 9000 ರೂ ಸಾಲ ಪಡೆದಿದ್ದರು, ಅದನ್ನು ಕಳೆದ ವರ್ಷವೇ ಮರುಪಾವತಿಸಿದ್ದರು. ಆದರೆ ಪ್ರಮೋದ್ ಸಿಂಗ್ ಬಡ್ಡಿ ಹಣ ನೀಡುವಂತೆ ನಿರಂತರವಾಗಿ ಬೇಡಿಕೆ ಇಡುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಪ್ರಮೋದ್ ಕುಮಾರ್ ಸಿಂಗ್ ಮತ್ತು ಆತನ ಬೆಂಬಲಿಗರು ತನ್ನ ಮನೆಗೆ ಬಂದು ಬಲವಂತವಾಗಿ ಎತ್ತಿಕೊಂಡು ಹೋಗಿ ತಮ್ಮ ಮನೆಗೆ ಕರೆದೊಯ್ದು ತೀವ್ರವಾಗಿ ಥಳಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆಶಾದೇವಿ ಆರೋಪಿಸಿದ್ದಾರೆ. ಪುಂಡರು ಮಹಿಳೆಯನ್ನು ವಿವಸ್ತ್ರಗೊಳಿಸಿ ಮೂತ್ರ ಕುಡಿಸಿದ್ದಾರೆ ಎಂದು ಸಂತ್ರಸ್ತೆಯ ಸೋದರ ಮಾವ ಮತ್ತು ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಗ್ರಾಮದ ಪ್ರಮೋದ್ ಕುಮಾರ್ ಸಿಂಗ್ ಮತ್ತು ಅವರ ಮಗ ಪಿಯೂಷ್ ಕುಮಾರ್ ಆಶಾದೇವಿಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಪೂರ್ಣ ವಿಷಯದ ಬಗ್ಗೆ ಫತುಹಾ ಡಿಎಸ್ಪಿ ಸಿಯಾರಾಮ್ ಯಾದವ್ ಅವರನ್ನು ಕೇಳಿದಾಗ, ಹಲ್ಲೆಯ ಘಟನೆಯನ್ನು ಒಪ್ಪಿಕೊಳ್ಳುತ್ತಾ, ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೂತ್ರ ಕುಡಿಸಿದ ಆರೋಪವನ್ನು ನಿರಾಕರಿಸಿದ್ದಾರೆ. ಸಂತ್ರಸ್ತ ಮಹಿಳೆ ತನ್ನ ಪರಿಚಯಸ್ಥರೊಬ್ಬರಿಗೆ 5-6 ವರ್ಷಗಳ ಹಿಂದೆ ಪ್ರಮೋದ್ ಕುಮಾರ್ ಸಿಂಗ್ ಎಂಬುವವರಿಂದ 6000 ರೂಪಾಯಿಗಳನ್ನು ಸಾಲವಾಗಿ ನೀಡಿದ್ದು, ಅದನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.