ಕಾವೇರಿದ ಕಾವೇರಿ ಪ್ರತಿಭಟನೆ! – ಮಂಗಳವಾರ ಬೆಂಗಳೂರು ಬಂದ್, ಶಾಲೆ ಕಾಲೇಜುಗಳಿಗೆ ರಜೆ?
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ಮತ್ತೊಮ್ಮೆ ಉದ್ವಿಘ್ನ ಸ್ಥಿತಿ ನಿರ್ಮಾಣವಾಗುತ್ತಿದೆ. ಮುಂದಿನ 15 ದಿನಗಳವರೆಗೆ ಪತಿನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆ ಕಿಚ್ಚು ಹೊತ್ತಿದೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಖಂಡಿಸಿ ಸೆ.26 ಕ್ಕೆ ಬೆಂಗಳೂರು ನಗರ ಬಂದ್ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಕರೆ ನೀಡಿದ್ದಾರೆ.
ಇದನ್ನೂ ಓದಿ: ಕಾವೇರಿ ನೀರಿಗಾಗಿ ತೀವ್ರಗೊಂಡ ಹೋರಾಟ – ಬೆಂಗಳೂರಿನಲ್ಲಿ ಹೈಅಲರ್ಟ್ ಘೋಷಣೆ!
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ.26 ಕ್ಕೆ ಬೆಂಗಳೂರು ನಗರ ಬಂದ್ಗೆ ಕರೆ ನೀಡಲಾಗಿದ್ದು, ಎಲ್ಲ ಸಂಘ ಸಂಸ್ಥೆಗಳ ನಿರ್ಧಾರದ ಮೇರೆಗೆ ಘೋಷಣೆ ಮಾಡಲಾಗಿದೆ. ಎಲ್ಲ ತಾಲೂಕುಗಳಲ್ಲಿ ಬಂದ್ ಮಾಡುವ ಮೂಲಕ ಬೆಂಬಲಿಸಬೇಕು. ಟೌನ್ ಹಾಲ್ನಿಂದ ಮೈಸೂರು ಬ್ಯಾಂಕ್ ಸರ್ಕಲ್ವರೆಗೆ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಶಾಲಾ ಕಾಲೇಜುಗಳ ಮುಖ್ಯಸ್ಥರು ಶಾಲೆಗಳಿಗೆ ರಜೆ ಘೋಷಿಸುವಂತೆ ಮನವಿ ಮಾಡಲಾಗಿದೆ. ಜೊತೆಗೆ ಬೆಂಗಳೂರಿನ ಐಟಿ ಕಂಪನಿಗಳು ಸ್ವಯಂ ಪ್ರೇರಿತವಾಗಿ ಕೆಲಸಕ್ಕೆ ಗೈರಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇವತ್ತು ಸರ್ಕಾರ ತಮಿಳುನಾಡಿಗೆ ನೀರನ್ನು ಹರಿಸ್ತಿದ್ದಾರೆ. ಈ ಕೂಡಲೇ ನೀರನ್ನ ಹರಿಸುವ ಕೆಲಸವನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಬೆಂಗಳೂರು ನಗರವನ್ನು ಕಾವೇರಿ ನೀರಿನ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಈಗಾಗಲೇ ಮಂಡ್ಯದಲ್ಲಿ ಬಂದ್ ಮಾಡಿದ್ದಾರೆ. ಮಂಗಳವಾರ ಬೆಂಗಳೂರು ಬಂದ್ ನಿಶ್ಚಿತ ಎಂದು ಶಾಂತಕುಮಾರ್ ಹೇಳಿದರು.
ಇನ್ನು ಬಂದ್ಗೆ ಬೆಂಬಲ ಸೂಚಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಕೂಡ ಶಾಂತಕುಮಾರ್ ಮನವಿ ಮಾಡಿದ್ದಾರೆ. ಸಿನಿಮಾ ರಂಗದವರನ್ನ ಜನಸಾಮಾನ್ಯರು ಬೆಳೆಸಿದ್ದಾರೆ. ಸಿನಿಮಾ ನಟರು ಸ್ವಯಂ ಪ್ರೇರಿತವಾಗಿ ಬಂದ್ಗೆ ಬರಬೇಕು. ಸಭೆಗೆ ಬಾರದೆ ಇರುವವರನ್ನ ಭೇಟಿಯಾಗಿ ಮಾತನಾಡುತ್ತೇವೆ. ಇಡೀ ಚಿತ್ರೋದ್ಯಮ ಒಂದು ದಿನ ಚಟುವಟಿಕೆ ನಿಲ್ಲಿಸಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.