ವಿಶ್ವಕಪ್ ಟೂರ್ನಿಯಲ್ಲಿ ಆಡುವ ಎಲ್ಲಾ ತಂಡಗಳಿಗೂ ಸಿಗುತ್ತೆ ಭರ್ಜರಿ ಹಣ – ಬಹುಮಾನದ ಮೊತ್ತ ಪ್ರಕಟಿಸಿದ ಐಸಿಸಿ
ಕ್ರಿಕೆಟ್ ಪ್ರೇಮಿಗಳಿಗೆ ಏಷ್ಯಾಕಪ್ ಫೀವರ್ ಬಳಿಕ ವಿಶ್ವಕಪ್ ಕ್ರೇಜ್ ಶುರುವಾಗಿದೆ. ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಅಕ್ಟೋಬರ್ 5 ಆರಂಭವಾಗುತ್ತವೆ. ಗುಜರಾತ್ನ ಅಹಮದಾಬಾದ್ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಬಾರಿಯ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯು ವಿಶ್ವಕಪ್ನ 13 ನೇ ಆವೃತ್ತಿಯಾಗಿದೆ.
ಭಾರತದ ಸಂಪೂರ್ಣ ಆತಿಥ್ಯದೊಂದಿಗೆ ನಡೆಯುತ್ತಿರುವ ವಿಶ್ವಕಪ್ ಪಂದ್ಯಗಳು ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ನಡೆಯುತ್ತಿದ್ದು, ಟೂರ್ನಿಗೆ ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ (ICC) ನಗದು ಬಹುಮಾನದ ಮೊತ್ತವನ್ನು ಪ್ರಕಟಿಸಿದೆ. ಮುಂದಿನ ತಿಂಗಳು ಆರಂಭವಾಗುವ ಈ ಟೂರ್ನಿಯಲ್ಲಿ ಆಡಲಿರುವ ಎಲ್ಲಾ 48 ಪಂದ್ಯಗಳಿಗೆ ಬಹುಮಾನದ ಮೊತ್ತ (Prize Money) ಮತ್ತು ಪ್ರೋತ್ಸಾಹ ಧನವನ್ನು ಐಸಿಸಿ ಪ್ರಕಟಿಸಿದೆ. ಈ ಟೂರ್ನಿಗೆ ಒಟ್ಟು 10 ಮಿಲಿಯನ್ ಡಾಲರ್ (83.10 ಕೋಟಿ) ಮೊತ್ತವನ್ನ ಘೋಷಿಸಿದೆ. ಏಕದಿನ ವಿಶ್ವಕಪ್ ವಿಜೇತ ತಂಡಕ್ಕೆ 4 ಮಿಲಿಯನ್ ಯುಎಸ್ ಡಾಲರ್ (USD) ಮೊತ್ತವನ್ನು (33.24 ಕೋಟಿ ರೂ.) ಪಡೆಯಲಿದೆ ಹಾಗೂ ರನ್ನರ್ ಅಪ್ ತಂಡ ಇದರಲ್ಲಿ ಅರ್ಧ ಅಂದರೆ, 16.62 ಕೋಟಿ ರೂ. ಗಳನ್ನು ಪಡೆದುಕೊಳ್ಳಲಿದೆ. ಸೆಮಿಫೈನಲ್ನಲ್ಲಿ ಸೋತ ಎರಡೂ ತಂಡಗಳಿಗೆ ತಲಾ 8 ಲಕ್ಷ ಡಾಲರ್ (ಸುಮಾರು 6.64 ಕೋಟಿ ರೂ.) ಸಿಗಲಿದೆ. ಸೆಮಿಫೈನಲ್ ತಲುಪುವಲ್ಲಿ ವಿಫಲವಾಗುವ ಎಲ್ಲಾ ತಂಡಗಳಿಗೆ 1 ಲಕ್ಷ ಯುಎಸ್ ಡಾಲರ್ (ಅಂದಾಜು 83.10 ಲಕ್ಷ ರೂ.) ನೀಡಲಾಗುತ್ತದೆ.
ಇದನ್ನೂ ಓದಿ : ಭಾರತದಲ್ಲೀಗ ಐಫೋನ್ 15 ಮೇನಿಯಾ! – ಫೋನ್ ಖರೀದಿಸಲು ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತ ಗ್ರಾಹಕರು!
ಗುಂಪು ಹಂತದ ಪಂದ್ಯಗಳಲ್ಲಿ ವಿಜೇತ ತಂಡಗಳು 40 ಸಾವಿರ ಯುಎಸ್ ಡಾಲರ್ ( 33.24 ಲಕ್ಷ ರೂ.) ಬಹುಮಾನ ಪಡೆಯಲಿವೆ. ಈ ಟೂರ್ನಿಯಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನಕ್ಕಾಗಿ ಐಸಿಸಿ 1 ಕೋಟಿ ಡಾಲರ್ (ಸುಮಾರು 82.93 ಕೋಟಿ ರೂ.) ಖರ್ಚು ಮಾಡುತ್ತಿದೆ. ಟೂರ್ನಿಯನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಮತ್ತು ಆಟಗಾರರು ಮತ್ತು ಅಭಿಮಾನಿಗಳಿಗೆ ಮನರಂಜನೆ ನೀಡಲು ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಇನ್ನು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. 45 ಲೀಗ್ ಪಂದ್ಯಗಳು ಮತ್ತು 3 ನಾಕೌಟ್ ಪಂದ್ಯಗಳು ನಡೆಯಲಿವೆ. ಭಾರತ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನೆದರ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Council – ICC) ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಏಕದಿನ ಅಂತಾರಾಷ್ಟ್ರೀಯ (ODI) ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುತ್ತದೆ. ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಈ ಬಾರಿ ಭಾರತದಲ್ಲಿ ನಡೆಸಲಾಗುತ್ತಿದೆ. 2019ರ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸೇರಿದಂತೆ 10 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ. 1987, 1996 ಮತ್ತು 2011ರಲ್ಲಿ ಭಾರತ ಉಪಖಂಡದ ಇತರ ದೇಶಗಳೊಂದಿಗೆ ಪಂದ್ಯಾವಳಿಯ ಸಹ-ಆತಿಥ್ಯ ವಹಿಸಿದ್ದ ಭಾರತವು ಸಂಪೂರ್ಣವಾಗಿ ತನ್ನದೇ ಆತಿಥ್ಯದಲ್ಲಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಇದೇ ಮೊದಲು. ನವೆಂಬರ್ 19, 2023 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.