ಕಾವೇರಿ ನೀರಿಗಾಗಿ ತೀವ್ರಗೊಂಡ ಹೋರಾಟ – ಬೆಂಗಳೂರಿನಲ್ಲಿ ಹೈಅಲರ್ಟ್ ಘೋಷಣೆ!
ಬೆಂಗಳೂರು: ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಕೊಟ್ಟ ಆದೇಶ ಕರುನಾಡಲ್ಲಿ ಕಿಚ್ಚು ಹತ್ತುವಂತೆ ಮಾಡಿದೆ. ರಾಜ್ಯ ಸರ್ಕಾರದ ವಿರುದ್ದ ಅನೇಕ ರೈತಪರ ಸಂಘನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಕಾವೇರಿ ವಿವಾದದ ವಿಚಾರವಾಗಿ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಶನಿವಾರ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಕಾವೇರಿಗಾಗಿ ಮಂಡ್ಯ ನಗರ, ಮದ್ದೂರು ಬಂದ್ ಮಾಡಲಾಗಿದೆ. ಅತ್ತಿಬೆಲೆ ಗಡಿ ಬಂದ್ ಆಗಿದೆ.
ಇತ್ತ ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಜಲ ಸಂರಕ್ಷಣಾ ಸಮಿತಿ, ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.. ಹೀಗಾಗಿ ಬೆಂಗಳೂರು ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸರ ನಿಯೋಜನೆಗೆ ಸೂಚಿಸಿಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಶನಿವಾರ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ತಟ್ಟಲಿದೆ ಟ್ರಾಫಿಕ್ ಬಿಸಿ!
ತಮಿಳುನಾಡು ಕಡೆ ಹೊರಡುವ ಬಸ್ಗಳು, ಬಸ್ ನಿಲ್ದಾಣಗಳ ಮೇಲೆ ನಿಗಾ ಇಡುವಂತೆ ತಿಳಿಸಿದ್ದಾರೆ. ತಮಿಳು ನಿವಾಸಿಗಳು ವಾಸಿಸುತ್ತಿರುವ ಕಡೆ ನಿಗಾ ವಹಿಸಿ ಗಸ್ತು ಮಾಡುವಂತೆ ಸೂಚಿಸಲಾಗಿದೆ. 2016ರಲ್ಲಿ ಕಾವೇರಿ ಗಲಾಟೆ ನಡೆದ ಏರಿಯಾಗಳಲ್ಲಿ ತೀವ್ರ ನಿಗಾ ಇಡಲು ಹಾಗೂ ನಗರದ ಪಶ್ಚಿಮ, ಉತ್ತರ ವಿಭಾಗದಲ್ಲಿ ತೀವ್ರ ನಿಗಾವಹಿಸಲು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು ಸೂಚನೆ ನೀಡಿದ್ದಾರೆ.
ಮೈಸೂರು ರಸ್ತೆಯ ಏರಿಯಾಗಳು, ಹೊಸೂರು ರಸ್ತೆಯ ಏರಿಯಾ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ಸ್ಯಾಟ್ಲೈಟ್ ಆಸುಪಾಸು, ಕೆಆರ್ ಮಾರ್ಕೆಟ್ ಸೇರಿದಂತೆ ಪ್ರಮುಖ ಏರಿಯಾಗಳಲ್ಲಿ ನಿಗಾ ಇಡಲು ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಏರಿಯಾಗಳಲ್ಲಿ ಗಸ್ತು ನಡೆಸಲು ಸೂಚನೆ ಕೊಡಲಾಗಿದೆ. ಆಯಾ ಡಿಸಿಪಿಗಳೇ ತಮ್ಮ ವ್ಯಾಪ್ತಿಯಲ್ಲಿ ಬಂದೋಬಸ್ತ್ ಮಾಡಬೇಕು. ಪ್ರತಿಭಟನೆ, ಹೋರಾಟಗಳ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಜರುಗಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೂಚನೆ ನೀಡಿದ್ದಾರೆ.