ಬೆಂಗಳೂರಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸುವಂತೆ ಪಟ್ಟು – ಮಂಡ್ಯದ ಪಂಪ್ ಹೌಸ್ ಗೆ ಮುತ್ತಿಗೆ ಹಾಕಿ ಸಂಘಟನೆಗಳ ಆಕ್ರೋಶ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ರಾಜ್ಯದಲ್ಲಿ ಮತ್ತೊಮ್ಮೆ ಉದ್ವಿಘ್ನ ಸ್ಥಿತಿ ನಿರ್ಮಾಣವಾಗುತ್ತಿದೆ. ಮುಂದಿನ 15 ದಿನಗಳವರೆಗೆ ಪತಿನಿತ್ಯ 5 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುವಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಗುರುವಾರ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆ ಕಿಚ್ಚು ಹೊತ್ತಿದೆ.
ಇದನ್ನೂ ಓದಿ : ಗಣೇಶನ ನೈವೇದ್ಯದ ಲಡ್ಡು ಪ್ರಸಾದ ಬರೋಬ್ಬರಿ 32 ಸಾವಿರ ರೂಪಾಯಿಗೆ ಹರಾಜು!
ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಬೆಂಗಳೂರಿನಲ್ಲಿ ಅಹಿತಕರ ಘಟನೆಗಳು ಆಗದಂತೆ ನಗರದ ಪೊಲೀಸರು ಹೈ ಅಲರ್ಟ್ ಆಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಿನ್ನಲೆ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪೊಲೀಸರ ಭದ್ರತೆ ನಿಯೋಜಿಸಲಾಗಿದೆ.
ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಕಾವೇರಿಯನ್ನೇ ನಂಬಿ ಬದುಕುತ್ತಿರುವ ಮಂಡ್ಯದಲ್ಲಿ ಕೂಡ ಕಾವೇರಿ ಹೋರಾಟ ತೀವ್ರಗೊಂಡಿದೆ. ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿರುವ ಪಂಪ್ ಹೌಸ್ಗೆ ವಿವಿಧ ಕನ್ನಡಪರ ಸಂಘಟನೆಗಳು ಮುತ್ತಿಗೆ ಹಾಕಿ ಬೆಂಗಳೂರಿಗೆ ನೀರು ಸರಬರಾಜು ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.