ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಭಾರಿ ಹೆಚ್ಚಳ! – ಕಳೆದ ಎಂಟು ತಿಂಗಳಲ್ಲಿ ಬರೋಬ್ಬರಿ 90 ಸಾವಿರ ಪ್ರಯಾಣಿಕರು ಹೆಚ್ಚಳ
ಬೆಂಗಳೂರು: ಸಿಲಿಕಾನ್ ಸಿಟಿ ಜನರು ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು ಹೋಗಿದ್ದಾರೆ. ಆಫೀಸ್, ಕಾಲೇಜಿಗೆ ಸರಿಯಾದ ಸಮಯಕ್ಕೆ ತಲುಪಲು ಮೆಟ್ರೋದಲ್ಲೇ ಪ್ರಯಾಣಿಸುತ್ತಾರೆ. ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ಎಂಟು ತಿಂಗಳಲ್ಲಿ ಪ್ರತಿ ದಿನ ಪ್ರಯಾಣಿಕರ ಸಂಖ್ಯೆಯಲ್ಲಿ90 ಸಾವಿರ ಹೆಚ್ಚಳವಾಗಿದ್ದು, ಈ ತಿಂಗಳಾಂತ್ಯಕ್ಕೆ 1 ಲಕ್ಷ ತಲುಪುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಜೂನ್ ತಿಂಗಳಲ್ಲಿಸರಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ಯನ್ನು ರಾಜ್ಯ ಸರಕಾರ ಜಾರಿ ಮಾಡಿತು. ಹಾಗಾಗಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ತಗ್ಗಲಿದೆ ಎಂಬ ಆತಂಕ ಎದುರಾಗಿತ್ತು. ಆದರೆ ಜೂನ್ ತಿಂಗಳಲ್ಲಿ ಪ್ರತಿ ದಿನ ಪ್ರಯಾಣಿಕರ ಸಂಖ್ಯೆ 6 ಲಕ್ಷಕ್ಕೆ ಏರಿಕೆಯಾಗಿದೆ. ಈ ತಿಂಗಳ ಅಂತ್ಯದೊಳಗೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ನಮ್ಮ ಮೆಟ್ರೊದ ಬಹು ನಿರೀಕ್ಷಿತ ನೀಲಿ ಮಾರ್ಗದ ಬಾಕಿ ಉಳಿದಿರುವ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ (1.9 ಕಿ.ಮೀ.) ಹಾಗೂ ಕೆ.ಆರ್.ಪುರದಿಂದ ಬೈಯ್ಯಪ್ಪನಹಳ್ಳಿವರೆಗಿನ (2 ಕಿ.ಮೀ.) ಮಾರ್ಗದಲ್ಲಿಸಂಚಾರ ಆರಂಭವಾಗಲಿದ್ದು, ಪ್ರತಿ ದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಕನಿಷ್ಠ 10 ರಿಂದ 15 ಸಾವಿರ ಅಧಿಕವಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ಇದನ್ನೂಓದಿ: ಡ್ರೈವರ್ ಇಲ್ಲದೇ ಓಡುತ್ತೆ ನಮ್ಮ ಮೆಟ್ರೋ! – ಹೊಸ ಸೇವೆ ಶೀಘ್ರದಲ್ಲೇ ಆರಂಭ!
ಕೋವಿಡ್ ಪೂರ್ವದಲ್ಲಿ’ನಮ್ಮ ಮೆಟ್ರೊ’ದಲ್ಲಿಪ್ರತಿದಿನ ಸರಾಸರಿ 4 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಕೋವಿಡ್ ನಂತರ ಈ ಸಂಖ್ಯೆ 2 ಲಕ್ಷಕ್ಕೆ ಇಳಿಕೆಯಾಗಿತ್ತು. ಆದರೆ 2023ರ ಜನವರಿಯಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಜನವರಿಯಲ್ಲಿ ಪ್ರತಿದಿನ ಸರಾಸರಿ 5.32 ಲಕ್ಷ ಜನರು ಪ್ರಯಾಣ ಮಾಡಿದ್ದರು. ಆಗಸ್ಟ್ನಲ್ಲಿ ಪ್ರತಿ ದಿನ 6.25 ಲಕ್ಷ ಜನರು ಮೆಟ್ರೊ ಬಳಕೆ ಮಾಡಿದ್ದಾರೆ. ಶಕ್ತಿ ಯೋಜನೆ ಬರುವ ಪೂರ್ವದಲ್ಲಿ ಪ್ರತಿದಿನ ಸರಾಸರಿ 5.81 ಲಕ್ಷ ಜನರ ಪ್ರಯಾಣ ಮಾಡುತ್ತಿದ್ದರು.