ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಹೆಚ್ಚಾದ ರೈತರ ಹೋರಾಟ- ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂನು ಕ್ರಮ ಎಂದ ಗೃಹಸಚಿವ
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಸಂಬಂಧ ಕರ್ನಾಟಕಕ್ಕೆ ಬಿಗ್ ಶಾಕ್ ಎದುರಾಗಿದೆ. ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ತೀರ್ಪು ಹೊರ ಬಂದ ಬೆನ್ನಲ್ಲೇ ರಾಜ್ಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧ ತೀವ್ರ ವ್ಯಕ್ತವಾಗಿದೆ. ಹಲವು ಕಡೆಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದೀಗ ಪ್ರತಿಭಟನಕಾರರಿಗೆ ಗೃಹ ಸಚಿವ ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಾವೇರಿ ನೀರಿಗಾಗಿ ಹೋರಾಟ ಮಾಡುವವರು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ತೀರ್ಪಿನಿಂದ ಮಂಡ್ಯ ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಆಗ್ತಿದೆ. ಪ್ರತಿಭಟನೆ ಮಾಡೋದು ಅವರ ಹಕ್ಕು. ಆದರೆ ಪ್ರತಿಭಟನೆ ವೈಲೆಂಟ್ ಆಗಬಾರದು. ಅಹಿತಕರ ಘಟನೆ ಆದ್ರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕಕ್ಕೆ ಬಿಗ್ ಶಾಕ್ – 15 ದಿನ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶ
ಸುಪ್ರೀಂ ಕೋರ್ಟ್ ತೀರ್ಪು ಸರ್ಕಾರವನ್ನು ತೊಂದರೆಗೆ ಸಿಲುಕಿಸಿದೆ. ನಮ್ಮಲ್ಲಿ ನೀರೇ ಇಲ್ಲ. ಇಂತಹ ಸಮಯದಲ್ಲಿ ನಮ್ಮ ಅಹವಾಲನ್ನ ಸರಿಯಾದ ರೀತಿಯಲ್ಲಿ ನಾವು ಕೇಳಿದ್ವಿ. ನಮ್ಮ ಕಷ್ಟಗಳನ್ನ ಅರ್ಥ ಮಾಡಿಕೊಳ್ಳದ ತೀರ್ಪು ಇದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಅಂತ ಹೇಳಿತ್ತು. ಇದಕ್ಕೆ ಬೇಕಾದ ದಾಖಲಾತಿಗಳನ್ನ ನಮ್ಮ ವಕೀಲರು ಕೋರ್ಟ್‌ಗೆ ನೀಡಿದ್ದರು. KRS ಡ್ಯಾಂ ನಲ್ಲಿ 20 TMC ನೀರು ಇದೆ. 10 TMC ಡೆಡ್ ಸ್ಟೋರೇಜ್ ಹೊರತುಪಡಿಸಿದ್ರೆ, ಉಳಿಯೋದು 10 TMC ಮಾತ್ರ. ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡೋಕೆ ಸಾಧ್ಯವಿಲ್ಲ. ಬೆಳೆಗಳಿಗೆ, ಕುಡಿಯೋಕೆ ನೀರು ಇಲ್ಲ. ಕನಿಷ್ಠ ಪಕ್ಷ ಕುಡಿಯುವ ನೀರಿಗಾದ್ರು ಕೋರ್ಟ್ ಅವಕಾಶ ಕೊಡಬೇಕಾಗಿತ್ತು ಎಂದು ಹೇಳಿದ್ದಾರೆ.
ನೀರು ಇದ್ದರೆ ಬಿಡಬಹುದು. ನೀರೇ ಇಲ್ಲದೆ ಬಿಡೋದು ಹೇಗೆ. ನಮಗೆ ಸಂಕಷ್ಟ ಸೂತ್ರವೇ ಇಲ್ಲ. ಸಂಕಷ್ಟ ಸೂತ್ರ ಮಾಡೋಕೆ ಯಾರಿಗೆ ಅಥಾರಿಟಿ ಇದೆಯೋ ಅದನ್ನ ಮಾಡಬೇಕು. ಹೀಗೆ ಆದ್ರೆ ಎಷ್ಟು ವರ್ಷ ಹೊಗೋದು. ಹೀಗಾಗಿ ಒಂದು ಸಂಕಷ್ಟ ಸೂತ್ರ ಇರಬೇಕು ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ, ನೀರಾವರಿ ಸಚಿವರು ದೆಹಲಿಯಲ್ಲಿ ಇದ್ದಾರೆ ಅವರು ಬಂದ ಮೇಲೆ ಚರ್ಚೆ ಮಾಡಿ ಏನ್ ಮಾಡೋದು ಅಂತ ತೀರ್ಮಾನ ಮಾಡ್ತೀವಿ ಎಂದು ಹೇಳಿದರು.