ಜನ್ಮ ನೀಡಿದ್ದು ಗಂಡು ಮಗುವಿಗೆ, ಕೈಗೆ ಕೊಟ್ಟಿದ್ದು ಹೆಣ್ಣು ಮಗು – ಕಿಮ್ಸ್ ವೈದ್ಯರ ವಿರುದ್ಧ ಪಾಲಕರ ಆಕ್ರೋಶ
ಹೆರಿಗೆಯಾದ ತಕ್ಷಣ ಪಾಲಕರಿಗೆ ಮಗು ಯಾವುದು ಎಂದು ವೈದ್ಯರು ಹೇಳುತ್ತಾರೆ. ಇನ್ನು ಕೆಲ ವೈದ್ಯರು ಹೆರಿಗೆಯಾದ ತಕ್ಷಣ ಮಗುವನ್ನು ತಂದು ಕೈಯಲ್ಲಿ ಇಡುತ್ತಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲೂ ತಾಯಿಯೊಬ್ಬರು ಹೆರಿಗೆಗಾಗಿ ಬಂದಿದ್ದರು. ನಿಮಗೆ ಗಂಡು ಮಗು ಹುಟ್ಟಿದೆ ಎಂದು ಅಂದೇ ವೈದ್ಯರು ತಿಳಿಸಿದ್ದರು. ಜೊತೆಗೆ ತಂದೆಗೂ ಗಂಡು ಮಗು ಹುಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಡಿಸ್ಚಾರ್ಜ್ ದಿನ ಮಾತ್ರ ಕೈಗೆ ಹೆಣ್ಣು ಮಗು ನೀಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸುರುಣಗಿ ಗ್ರಾಮದ ಮುತ್ತವ್ವ ಎಂಬ ಮಹಿಳೆಗೆ 15 ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಕಿಮ್ಸ್ ಸಿಬ್ಬಂದಿಯೇ ಗಂಡು ಮಗು ಎಂದು ದಾಖಲಾತಿ ಕೊಟ್ಟಿದ್ದಾರೆ. ಮಗು ತೂಕ ಕಡಿಮೆ ಇದೆ ಎನ್ನುವ ಕಾರಣಕ್ಕೆ ಮಗುವನ್ನು ಐಸಿಯುನಲ್ಲಿ ಇಡಲಾಗಿತ್ತು. 15 ದಿನಗಳ ಕಾಲ ಗಂಡು ಮಗು ಎಂದು ನಂಬಿದ್ದ ದಂಪತಿಗೆ ಬುಧವಾರ ಶಾಕ್ ಕಾದಿತ್ತು. ಸೆ. 20ರಂದು ಸಿಬ್ಬಂದಿ ಮಗುವಿನ ಪೋಷಕರ ಕೈಗೆ ಕೊಟ್ಟಿರುವುದು ಹೆಣ್ಣು ಮಗುವನ್ನು. 15 ದಿನಗಳ ಹಿಂದೆ ಗಂಡು ಮಗು ಎಂದು ಹೇಳಿದ್ದವರು, ಇವತ್ಯಾಕೆ ಹೆಣ್ಣು ಮಗು ನೀಡಿದ್ದಾರೆ ಎಂದು ಮಗುವಿನ ಪೋಷಕರು ಸಿಬ್ಬಂದಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಂಡು ಮಗು ಎಂದು ಹೆಣ್ಣು ಮಗು ಕೊಡುವ ಮೂಲಕ ಗಂಡು ಮಗು ಮಾರಾಟ ಮಾಡೋಕೆ ಮುಂದಾದರಾ? ಎನ್ನುವ ಅನುಮಾನ ಮೂಡಿದೆ. ಕಿಮ್ಸ್ ನಲ್ಲಿ ಆಗಿರುವ ಈ ಯಡವಟ್ಟಿನ ಬಗ್ಗೆ ಆಸ್ಪತ್ರೆಯ ಬಗ್ಗೆ ಅಧೀಕ್ಷಕ ಡಾ. ಅರುಣಕುಮಾರ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಆಸ್ಪತ್ರೆಯಲ್ಲಿ ಮುತ್ತವ್ವ ಪೂಜಾರ ಅವರಿಗೆ ಗಂಡು ಜನಿಸಿದ್ದು ತಮ್ಮ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಗಳ ಬೇಜಾವಾಬ್ದಾರಿತನದಿಂದ ಹೆಣ್ಣು ಮಗು ಕೊಡಲಾಗಿತ್ತು. ಈಗ ಕಾರಣ ಕೇಳಿ ನರ್ಸಿಂಗ್ ಅಧಿಕಾರಿಗೆ ನೋಟಿಸ್ ಕೊಡುತ್ತೇವೆ ಎಂದು ತಿಳಿಸಿದ್ದಾರೆ.