ಚಿಕನ್ ಶವರ್ಮ ತಿಂದು ಬಾಲಕಿ ಸಾವು, 43 ಜನ ಅಸ್ವಸ್ಥ – ಶವರ್ಮ, ಗ್ರಿಲ್ಡ್ ಚಿಕನ್ ಮಾರಾಟ ನಿಷೇಧ!
ನಾನ್ ವೆಜ್ ಪ್ರಿಯರಿಗೆ ವಾರದಲ್ಲಿ 2 ದಿನವಾದ್ರೂ ಚಿಕನ್ ಬೇಕೆ ಬೇಕು. ಮನೆಯಲ್ಲಿ ಚಿಕನ್ ಮಾಡಿಲ್ಲ ಅಂದ್ರೆ ಹೋಟೆಲ್ಗಳಲ್ಲಿ ತಿಂದು ಬರುತ್ತಾರೆ. ಇನ್ನು ಮಕ್ಕಳಿಗೆ, ಯುವಕರಿಗೆ ಚಿಕನ್ ಫ್ರೈಡ್ ರೈಸ್, ಚಿಕನ್ ಶವರ್ಮ ಫೇವರೆಟ್ ಆಗಿದೆ. ಇದನ್ನೂ ಕಂಡ ತಕ್ಷಣ ಬಾಯಲ್ಲಿ ನೀರೂರುವುದು ಸಹಜ. ಆದರೆ ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಚಿಕನ್ ಶವರ್ಮ ತಿಂದ ಬಾಲಕಿಯೊಬ್ಬಳು ಅನಾರೋಗ್ಯಕ್ಕೊಳಗಾಗಿ ಸಾವನ್ನಪ್ಪಿದ್ದು, ಇತರ 43 ಜನ ಅಸ್ವಸ್ಥಗೊಂಡಿದ್ದಾರೆ. ಈ ಬೆನ್ನಲ್ಲೇ ಅಲ್ಲಿನ ಜಿಲ್ಲಾಡಳಿತ ಶವರ್ಮ ಹಾಗೂ ಗ್ರಿಲ್ಡ್ ಚಿಕನ್ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ ಎಂದು ವರದಿಯಾಗಿದೆ.
ತಮಿಳುನಾಡಿನ ನಮಕ್ಕಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಚಿಕನ್ ಶವರ್ಮ ತಿಂದು ಜನರು ಅಸ್ವಸ್ಥಗೊಂಡ ಘಟನೆ ವರದಿಯಾದ ಬೆನ್ನಲ್ಲೆ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶವರ್ಮ ಹಾಗೂ ಗ್ರಿಲ್ಡ್ ಚಿಕನ್ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಇದನ್ನೂ ಓದಿ: ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್, ಬುರ್ಖಾ ನಿಷೇಧ! – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಭಾರಿ ದಂಡ!
ಈ ಬಗ್ಗೆ ನಮಕ್ಕಲ್ನ ಜಿಲ್ಲಾಧಿಕಾರಿ ಡಾ.ಎಸ್.ಉಮಾ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದಾರೆ. ನಮಕ್ಕಲ್ನ ರೆಸ್ಟೋರೆಂಟ್ವೊಂದರಲ್ಲಿ ಶುಕ್ರವಾರ ಮತ್ತು ಶನಿವಾರದಂದು ಊಟ ಮಾಡಿದ 43 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇಲ್ಲಿ ಊಟ ಮಾಡಿದ ಬಾಲಕಿಯೂ ಅಸ್ವಸ್ಥಗೊಂಡಿದ್ದು, ಆಕೆಯನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆಯ ನಂತರ ನಮಕ್ಕಲ್ ಜಿಲ್ಲೆಯಾದ್ಯಂತ ಹೋಟೆಲ್ಗಳಲ್ಲಿ ಶವರ್ಮಾ ಮತ್ತು ಗ್ರಿಲ್ಡ್ ಮತ್ತು ತಂದೂರಿ ಚಿಕನ್ ಖಾದ್ಯಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಮಕ್ಕಲ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಏನಿದು ಘಟನೆ?
ನಾಮಕಲ್ ಮುನ್ಸಿಪಾಲಿಟಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಟಿ ಕಲೈಅರಸಿ (14) ಮೃತ ಬಾಲಕಿಯಾಗಿದ್ದು, ಈಕೆ ತನ್ನ ಪೋಷಕರಾದ ತವಕುಮಾರ್ ಮತ್ತು ಟಿ ಸುಜಾತ ಹಾಗೂ ಸಹೋದರ ಟಿ ಬೂಪತಿ ಮತ್ತು ಸಂಬಂಧಿಕರಾದ ಚಿನ್ರಾಜ್ ಅವರೊಂದಿಗೆ ಹೋಟೆಲ್ಗೆ ಭೇಟಿದ್ದು, ಅಲ್ಲಿ ಶವರ್ಮಾ ತಿಂದಿದ್ದಾರೆ. ಹೊಟೇಲ್ನಲ್ಲಿ ಬಾಲಕಿ ಕುಟುಂಬದವರು ಫ್ರೈಡ್ ರೈಸ್, ಶವರ್ಮಾ ಮತ್ತು ಮ್ಯಾರಿನೇಡ್ ಮಾಂಸ ಭಕ್ಷ್ಯಗಳನ್ನು ಸೇವಿಸಿದ್ದರು. ಇಲ್ಲಿ ಆಹಾರ ಸೇವಿಸಿ ಎಎಸ್ ಪೇಟ್ಟೈನಲ್ಲಿರುವ ಮನೆಗೆ ತೆರಳಿದ ನಂತರ ಬಾಲಕಿ ವಾಂತಿ ಮಾಡಲು ಶುರು ಮಾಡಿದ್ದಾಳೆ. ಜೊತೆಗೆ ಆಕೆಗೆ ಜ್ವರ, ತಲೆ ತಿರುಗುವುದು ಹಾಗೂ ಭೇದಿಯೂ ಇತ್ತು, ಕೂಡಲೇ ಮನೆಯವರು ಭಾನುವಾರ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಆಕೆ ಮನೆಯಲ್ಲಿ ಪ್ರಾಣ ಬಿಟ್ಟಿದ್ದಾಳೆ.
ಈ ನಡುವೆ ಭಾನುವಾರ ಈ ಬಾಲಕಿಯನ್ನುಮನೆಯವರು ಖಾಸಗಿ ಕ್ಲಿನಿಕ್ಗೆ ಕರೆದೊಯ್ದು ಅಲ್ಲಿ ಔಷಧಿ ಪಡೆದು ಡಿಸ್ಚಾರ್ಜ್ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಆಕೆ ಶವವಾಗಿದ್ದಾಳೆ. ಆರೋಗ್ಯಾಧಿಧಿಕಾರಿಗಳು ಸೋಮವಾರ ಆಕೆಯ ಮನೆಗೆ ಹೋದಾಗ, ಆಕೆಯ ಸೋದರ 12 ವರ್ಷದ ಬೂಪತಿಯ, ನಾಡಿಮಿಡಿತ ಮತ್ತು ರಕ್ತದೊತ್ತಡ ಕಡಿಮೆಯಾಗಿತ್ತು. ಕುಟುಂಬದ ಇತರ ಸದಸ್ಯರಿಗೂ ಸಹ ವಿವಿಧ ರೋಗಲಕ್ಷಣಗಳು ಶುರು ಆಗಿದ್ದವು. ನಂತರ ಕುಟುಂಬದ ಎಲ್ಲ ಸದಸ್ಯರನ್ನು ನಾಮಕ್ಕಲ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಇದೇ ಹೊಟೇಲ್ನಲ್ಲಿ ಶನಿವಾರ ಹಾಗೂ ಭಾನುವಾರ ಈ ಎರಡು ದಿನಗಳಲ್ಲಿ 200 ಜನ ಊಟ ಮಾಡಿದ್ದು, ಅವರಲ್ಲಿ 43 ಜನರಿಗೆ ಆರೋಗ್ಯ ಕೆಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.