ಶಾಹೀನ್ ಅಫ್ರಿದಿ ಮದುವೆಯಲ್ಲಿ ನಾಯಕ ಬಾಬರ್ ಅಝಂ – ನಮ್ಮ ನಡುವೆ ಯಾವ ಮನಸ್ತಾಪವೂ ಇಲ್ಲ ಎಂದು ತೋರಿಸಿಕೊಟ್ಟ ಪಾಕ್ ಕ್ರಿಕೆಟಿಗರು
ಏಷ್ಯಾ ಕಪ್ ಮುಗಿದ ಮೇಲೆ ಪಾಕಿಸ್ತಾನದ ನಾಯಕ ಬಾಬರ್ ಆಝಂ ಮತ್ತು ವೇಗಿ ಶಾಹೀನ್ ಶಾ ಅಫ್ರಿದಿ ನಡುವೆ ಏನೋ ನಡೆದಿದೆ. ಇನ್ನು ಮುಂದೆ ಇಬ್ಬರೂ ಪರಸ್ಪರ ಮುಖವೇ ನೋಡಲ್ವೇನೋ ಎಂಬ ಸುದ್ದಿಗಳು ಓಡಾಡುತ್ತಿತ್ತು. ಆದರೆ, ಏನಿಲ್ಲ ಏನಿಲ್ಲ. ನನ್ನ ನಿನ್ನ ನಡುವೆ ಏನಿಲ್ಲ ಎಂದು ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ನಾಯಕ ಬಾಬರ್ ಆಝಂ, ವೇಗಿ ಶಾಹೀನ್ ಶಾ ಅಫ್ರಿದಿ ಮದುವೆಯಲ್ಲಿ ಪಾಲ್ಗೊಂಡು ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ. ಈ ಇಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಕೂಡಾ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ಸಂಜು ಸ್ಯಾಮ್ಸನ್‌ಗೆ ಮತ್ತೆ ಅನ್ಯಾಯ – ಮಾತಾಡದೇ ಮನದಲ್ಲಿರುವ ನೋವನ್ನು ಮೆಸೇಜ್ ಮೂಲಕ ಹೊರಹಾಕಿದ ಸಂಜು
ಏಷ್ಯಾ ಕಪ್ ಸೂಪರ್ 4 ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ ಎರಡು ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಸೋತು ಹೊರಬಿದ್ದಿತ್ತು. ಆ ಬಳಿಕ ತಂಡದ ಆಟಗಾರರ ಕಳಪೆ ಪ್ರದರ್ಶನಕ್ಕೆ ಅಸಮಾಧಾನಗೊಂಡಿದ್ದ ತಂಡದ ನಾಯಕ ಬಾಬರ್ ಆಝಂ ,ಡ್ರೆಸಿಂಗ್ ಕೋಣೆಯಲ್ಲಿ ಆಟಗಾರರ ವಿರುದ್ಧ ಹರಿಹಾಯ್ದಿದ್ದರು. ಈ ವೇಳೆ ಬಾಬರ್ ಮಾತಿಗೆ ಅಡ್ಡ ಬಂದಿದ್ದ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ, ಬಾಬರ್ ಬಳಿ ವಾಗ್ವದ ನಡೆಸಿದ್ದರು. ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಬಾಬರ್ ಸಹ ಆಟಗಾರರಿಗೆ ಕಳಪೆ ಆಟದ ಬಗ್ಗೆ ತರಾಟೆಗೆ ತೆಗೆದುಕೊಂಡಿರುವಾಗ ಈ ವೇಳೆ ಉತ್ತಮ ಪ್ರದರ್ಶನ ನೀಡಿದ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತನಾಡುವಂತೆ ವೇಗಿ ಶಾಹೀನ್ ಕೇಳಿಕೊಂಡಿದ್ದರು. ಆದರೆ ಶಾಹೀನ್ ಮಾತಿಗೆ ಗರಂ ಆಗಿದ್ದ ಬಾಬರ್, ತಂಡದಲ್ಲಿ ಯಾರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದು ನನಗೆ ಗೊತ್ತು ಎಂದು ಖಾರವಾಗಿ ಉತ್ತರಿಸಿದ್ದರು. ಅಂತಿಮವಾಗಿ ಈ ಇಬ್ಬರ ವಾಕ್ಸಮರಕ್ಕೆ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಬ್ರೇಕ್ ಹಾಕಿದ್ದರು ಎಂದು ವರದಿಯಾಗಿತ್ತು. ಆದರೀಗ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ನಾಯಕ ಬಾಬರ್ ಆಝಂ, ವೇಗಿ ಶಾಹೀನ್ ಶಾ ಅಫ್ರಿದಿ ಮದುವೆಯಲ್ಲಿ ಪಾಲ್ಗೊಂಡು ಸಹ ಆಟಗಾರನಿಗೆ ಶುಭಾಶಯ ಕೋರಿದ್ದಾರೆ.
ವೇಗಿ ಶಾಹೀನ್ ಅಫ್ರಿದಿ ಈ ಹಿಂದೆಯೇ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿ ಮಗಳನ್ನು ಸರಳವಾಗಿ ವರಿಸಿದ್ದರು. ಆ ವೇಳೆ ಕೇವಲ ಕುಟುಂಬದ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅದ್ಧೂರಿಯಾಗಿ ಮತ್ತೊಮ್ಮೆ ಮದುವೆಯಾಗಲು ಶಾಹೀನ್ ಅಫ್ರಿದಿ ಬಯಸಿದ್ದರು. ಅದ್ದರಿಂದ ಏಷ್ಯಾಕಪ್ ಮುಗಿಸಿದ ಬೆನ್ನಲ್ಲೇ ಅಫ್ರಿದಿ ಹಾಗೂ ಅನ್ಶಾ ಕಳೆದ ಶುಕ್ರವಾರ ಕರಾಚಿಯಲ್ಲಿ ಅದ್ದೂರಿಯಾಗಿ ವೈವಾಹಿಕ ಜೀವಾನಕ್ಕೆ ಕಾಲಿರಿಸಿದ್ದರು. ಆರತಕ್ಷತೆಯಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡದ ಶಾಹೀನ್ ಅವರ ಸಹ ಆಟಗಾರರು ಭಾಗವಹಿಸಿದ್ದರು.