ʼ18 ತಿಂಗಳಿನಿಂದ ಸಂಬಳ ಬಂದಿಲ್ಲ.. ಮನೆ ನಡೆಸೋದು ಕಷ್ಟʼ! – ಚಂದ್ರಯಾನ-3ನಲ್ಲಿ ಕೆಲಸ ಮಾಡಿದ ತಂತ್ರಜ್ಞನಿಂದ ಇಡ್ಲಿ ಮಾರಾಟ?
ಚಂದ್ರಯಾನ-3 ಯೋಜನೆ ಯಶಸ್ವಿಯಾಗಿದ್ದು, ಚಂದ್ರನಲ್ಲಿ ಲ್ಯಾಂಡ್ ಆದ ವಿಕ್ರಮ್ ಲ್ಯಾಂಡರ್ ಸಾಕಷ್ಟು ಯಶಸ್ಸನ್ನು ಗಳಿಸಿದೆ. ಈ ಬೆನ್ನಲ್ಲೇ ಚಂದ್ರಯಾನ-3 ಲಾಂಚ್ಪ್ಯಾಡ್ ನಿರ್ಮಿಸಲು ಸಹಕರಿಸಿದ್ದ ತಂತ್ರಜ್ಞರೊಬ್ಬರಿಗೆ ಸಂಬಳವಿಲ್ಲದೆ ಈಗ ಅವರು ಇಡ್ಲಿ ಮಾರಾಟ ಮಾಡ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಮಾಧ್ಯಮಗಳ ವರದಿ ಮಾಡಿತ್ತು. ಇದೀಗ ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ.
ಚಂದ್ರಯಾನ-3 ಲಾಂಚ್ಪ್ಯಾಡ್ ನಿರ್ಮಿಸಲು ಕೆಲಸ ಮಾಡಿದ ತಂತ್ರಜ್ಞ ದೀಪಕ್ ಕುಮಾರ್ ಉಪ್ರಾರಿಯಾ, ಜಾರ್ಖಂಡ್ ರಾಜಧಾನಿ ರಾಂಚಿಯ ರಸ್ತೆಬದಿಯಲ್ಲಿ ಇಡ್ಲಿಗಳನ್ನು ಮಾರುತ್ತಾರೆ. ದೀಪಕ್ ಕುಮಾರ್ ರಾಂಚಿಯ ಧುರ್ವಾ ಪ್ರದೇಶದಲ್ಲಿ ಹಳೆಯ ಶಾಸನ ಸಭೆಯ ಎದುರು ಅಂಗಡಿ ಮಾಡಿದ್ದಾರೆ. ದೀಪಕ್ ಕುಮಾರ್ ಉಪ್ರಾರಿಯಾ ಅವರು ಚಂದ್ರಯಾನ-3 ಉಡಾವಣಾ ಕೇಂದ್ರದ ನಿರ್ಮಾಣದಲ್ಲಿ ಕೆಲಸ ಮಾಡಿದ್ದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗಿತ್ತು.
ಇದನ್ನೂ ಓದಿ: ಚಂದ್ರಯಾನಗಿಂತ, ಸೂರ್ಯಯಾನ ಕಂಪ್ಲೀಟ್ ಭಿನ್ನ! -ಲಾಗ್ರೇಂಜ್ ಪಾಯಿಂಟ್ ತಲುಪಲು ನೌಕೆ ಎಷ್ಟು ದಿನ ತೆಗೆದುಕೊಳ್ಳುತ್ತೆ?
ಈ ಕುರಿತಾಗಿ ಮಾತನಾಡಿದ ಅವರು, ಸುಮಾರು 18 ತಿಂಗಳಿನಿಂದ ಸಂಬಳ ಬಂದಿಲ್ಲ. ಮನೆ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಕೆಲವು ದಿನಗಳಿಂದ ಮನೆಯ ಅಗತ್ಯಗಳನ್ನು ಪೂರೈಸಲು ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದೇನೆ, ಬೆಳಿಗ್ಗೆ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದೇನೆ ಮತ್ತು ಮಧ್ಯಾಹ್ನ ಕಚೇರಿಗೆ ಹೋಗುತ್ತಿದ್ದೇನೆ ಎಂದು ಉಪ್ರಾರಿಯಾ ಮಾಧ್ಯಮಗಳಿಗೆ ತಿಳಿಸಿದ್ದರು.
ಈ ಬಗ್ಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ (PIB) ಫ್ಯಾಕ್ಟ್-ಚೆಕ್ ಯುನಿಟ್ ಸ್ಪಷ್ಟನೆ ನೀಡಿದೆ. HEC ಚಂದ್ರಯಾನ-3 ಗಾಗಿ ಯಾವುದೇ ಘಟಕವನ್ನು ಮಾಡಿಲ್ಲ ಮತ್ತು 2003 ಮತ್ತು 2010 ರ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗೆ ಕೆಲವು ಮೂಲಸೌಕರ್ಯಗಳನ್ನು ಮಾತ್ರ ಒದಗಿಸಿದೆ ಎಂದು ಹೇಳಿದೆ.