ಗಳಿಕೆಯಲ್ಲಿ ದಾಖಲೆ ಬರೆದ ‘ಜವಾನ್’ ಸಿನಿಮಾ – ದಕ್ಷಿಣ ಭಾರತದ ‘ಕೆಜಿಎಫ್ 2’ ‘ಬಾಹುಬಲಿ 2’ ಚಿತ್ರದ ಗಳಿಕೆ ಮೀರಿಸಿದ ‘ಜವಾನ್’
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ‘ಜವಾನ್’ ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ‘ಜವಾನ್’ ಸಿನಿಮಾ ಕೂಡಾ ದಿನದಿಂದ ದಿನಕ್ಕೆ ಉತ್ತಮ ಕಮಾಯಿ ಕಾಣುತ್ತಿದೆ. ಈಗಾಗಲೇ ವಿಶ್ವ ಬಾಕ್ಸ್ಆಫೀಸ್ನಲ್ಲಿ 800 ಕೋಟಿ ಬಾಚಿಕೊಂಡ ಜವಾನ್, ಬಾಲಿವುಡ್ ಬಾಕ್ಸ್ ಆಫೀಸ್ಲ್ಲೂ ಧೂಳೆಬ್ಬಿಸುತ್ತಿದೆ. ಅಲ್ಲದೇ, ದಕ್ಷಿಣ ಭಾರತದ ‘ಕೆಜಿಎಫ್ 2’, ‘ಬಾಹುಬಲಿ 2’ ಸಿನಿಮಾಗಳ ಕಲೆಕ್ಷನ್ ಮೀರಿ ದಾಖಲೆ ಬರೆಯುತ್ತಿದೆ.
ಇದನ್ನೂ ಓದಿ: ಬಾಕ್ಸ್ಆಫೀಸ್ನಲ್ಲಿ ಅಬ್ಬರಿಸಿದ ಶಾರುಖ್ ಖಾನ್ ಸಿನಿಮಾ – ವಿಶ್ವ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ಗಳಿಕೆ ಕಂಡ ‘ಜವಾನ್’
ಗಲ್ಲಾಪೆಟ್ಟಿಗೆಯಲ್ಲಿ ‘ಜವಾನ್’ ಸಿನಿಮಾ ಅಬ್ಬರಿಸುತ್ತಿದೆ. ಸೆಪ್ಟೆಂಬರ್ 7ರಂದು ರಿಲೀಸ್ ಆಗಿರುವ ‘ಜವಾನ್’ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಅಚ್ಚರಿ ಎಂದರೆ ಅತಿ ವೇಗವಾಗಿ 250 ಕೋಟಿ ರೂಪಾಯಿ ಗಳಿಸಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ‘ಜವಾನ್’ ಪಾತ್ರವಾಗಿದೆ. ‘ಕೆಜಿಎಫ್ 2’ ಮತ್ತು ‘ಬಾಹುಬಲಿ 2’ ಸಿನಿಮಾದ ಹಿಂದಿ ವರ್ಷನ್ ಅನ್ನು ‘ಜವಾನ್’ ಮೀರಿಸಿದೆ.
ಬಾಕ್ಸ್ಆಫೀಸ್ ಅಂಗಳದಲ್ಲಿ ದಾಖಲೆ ಬರೆದ ಪ್ರಮುಖ ಚಿತ್ರಗಳೆಂದರೆ ‘ಕೆಜಿಎಫ್ 2’ ಮತ್ತು ‘ಬಾಹುಬಲಿ 2’ ಸಿನಿಮಾಗಳು. ಆ ಚಿತ್ರಗಳ ಗಳಿಕೆಗೆ ಹೋಲಿಸಿದರೆ ‘ಜವಾನ್’ ಸಿನಿಮಾ ಬಹಳ ವೇಗವಾಗಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ಹಿಂದಿ ಮಾರುಕಟ್ಟೆಯಲ್ಲಿ 250 ಕೋಟಿ ರೂಪಾಯಿ ಗಳಿಸಲು ‘ಕೆಜಿಎಫ್ 2’ ಸಿನಿಮಾ 7 ದಿನಗಳನ್ನು ತೆಗೆದುಕೊಂಡಿತ್ತು. ‘ಬಾಹುಬಲಿ 2’ ಸಿನಿಮಾಗೆ 8 ದಿನಗಳು ಬೇಕಾಯ್ತು. ಆದರೆ ‘ಜವಾನ್’ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಇನ್ನು ಶಾರುಖ್ ಖಾನ್ ಅವರ ಮತ್ತೊಂದು ಯಶಸ್ವೀ ಚಿತ್ರ ‘ಪಠಾಣ್’ ರಿಲೀಸ್ ಆದ 5ನೇ ದಿನ ಇಷ್ಟು ಗಳಿಕೆ ಕಂಡಿತ್ತು. ಇದಾದ ನಂತರ ‘ಗದರ್ 2’ ಸಿನಿಮಾ 6ನೇ ದಿನ 250 ಕೋಟಿ ರೂಪಾಯಿ ಗಳಿಕೆ ಕಾಣುವುದರ ಮೂಲಕ ಯಶಸ್ವೀಯಾಗಿತ್ತು.
ಇದೀಗ ಬಾಲಿವುಡ್ನಲ್ಲಿ ಶಾರುಖ್ ಖಾನ್ ಜವಾನ್ ಸಿನಿಮಾ 300 ಕೋಟಿ ಕ್ಲಬ್ ಸೇರಿಯಾಗಿದೆ ಎನ್ನಲಾಗುತ್ತಿದೆ. ‘ಜವಾನ್’ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಸುನಿಲ್ ಗ್ರೋವರ್, ಸಂಜಯ್ ದತ್, ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶ್ವಾದ್ಯಂತ ಹಿಂದಿ, ತಮಿಳು, ತೆಲುಗು ವರ್ಷನ್ ಸೇರಿ ಈ ಸಿನಿಮಾಗೆ 10 ದಿನಗಳಲ್ಲಿ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ.