ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ – 2029ರ ಬಳಿಕವೇ ಮಹಿಳಾ ಮೀಸಲಾತಿ ಅನುಷ್ಠಾನ
ಸುದೀರ್ಘ ಕಾಯುವಿಕೆಯ ನಂತರ ಇದೀಗ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗಿದೆ. ಹಲವು ದಶಕಗಳಿಂದ ಬಾಕಿ ಉಳಿದಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದು ನಾರಿ ಶಕ್ತಿ ವಂದನಾ ಅಧಿನಿಯಮ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಇದನ್ನೂ ಓದಿ: ಸ್ವಾತಂತ್ರ್ಯ ಸಂಭ್ರಮ, ಐತಿಹಾಸಿಕ ನಿರ್ಣಯಗಳಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್ ಭವನದ ಇತಿಹಾಸವೇ ರೋಚಕ
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಸಂಸತ್‌ನಲ್ಲಿ ಮಂಡಿಸಿದ್ದಾರೆ. ಈ ಮಸೂದೆಗೆ ಸೋಮವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅಂಗೀಕಾರ ದೊರಕಿತ್ತು. ಈ ವಿಧೇಯಕವನ್ನು ಸಚಿವ ಮೇಘವಾಲ್ ಅವರು ಮಂಗಳವಾರ ಕೆಳಮನೆಯಲ್ಲಿ ಮಂಡಿಸಲಿದ್ದಾರೆ ಎಂದು ಲೋಕಸಭೆ ನೋಟಿಸ್‌ನಲ್ಲಿ ತಿಳಿಸಿತ್ತು. ಅದರಂತೆ ಮಧ್ಯಾಹ್ನ ಹೊಸ ಸಂಸತ್‌ನಲ್ಲಿ ಶುರುವಾದ ಅಧಿವೇಶನದಲ್ಲಿ ಮೊದಲ ಚರ್ಚೆಯನ್ನಾಗಿ ವಿಧೇಯಕದ ಮಂಡನೆ ನಡೆದಿದೆ. ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಒದಗಿಸುವ ಮಸೂದೆ ಕಾಯ್ದೆಯಾಗಿ ಅಂಗೀಕಾರಗೊಂಡರೂ, ಮುಂದಿನ ಲೋಕಸಭೆ ಚುನಾವಣೆಯಿಂದಲೇ ಜಾರಿಗೆ ಬರುವುದು ಸಾಧ್ಯವಿಲ್ಲ. 2029ರ ಬಳಿಕವೇ ಇದು ಅನುಷ್ಠಾನಗೊಳ್ಳಲಿದೆ ಎನ್ನಲಾಗಿದೆ.
ಸಂಸತ್ತು ಮತ್ತು ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿಗಾಗಿ ಕಳೆದ ಐದು ದಶಕಗಳಿಂದ ಬೇಡಿಕೆ ಇದೆ. 2010 ರಲ್ಲಿ, ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು, ಆದರೆ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿರಲಿಲ್ಲ. ಮೋದಿ ಸರ್ಕಾರ ಇದೀಗ ಮಹಿಳಾ ಮೀಸಲಾತಿ ಮಸೂದೆಯನ್ನು ತಂದಿದ್ದು, ಸಂಪುಟದಿಂದ ಅನುಮೋದನೆ ಪಡೆದ ನಂತರ ಸಂಸತ್ತಿನಲ್ಲಿ ಮಂಡಿಸಲಾಗುವುದು. ಈ ವಿಶೇಷ ಅಧಿವೇಶನದಲ್ಲಿಯೇ ಸಂಸತ್ತಿನ ಉಭಯ ಸದನಗಳಲ್ಲಿ ಈ ಮಸೂದೆಯನ್ನು ಅಂಗೀಕರಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಲಿದೆ. ಪ್ರಧಾನಿ ಮೋದಿ ಅವರೇ ಈ ಮಸೂದೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ, ಏಕೆಂದರೆ ಕಾಂಗ್ರೆಸ್ ಸಂಪೂರ್ಣ ಬೆಂಬಲದಲ್ಲಿದೆ. ಬಿಆರ್ ಎಸ್ ಕೂಡ ನಮ್ಮೊಂದಿಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಅತ್ಯಂತ ಸುಲಭವಾಗಿ ಅಂಗೀಕರಿಸುತ್ತದೆ. ಮಹಿಳಾ ಮೀಸಲಾತಿಯ ನೆಪದಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಓಲೈಸಲು ಮೋದಿ ಸರಕಾರ ಪಣತೊಟ್ಟಿದ್ದು, 2024ರ ಚುನಾವಣೆಯಲ್ಲಿ ಇದರಿಂದ ಬಿಜೆಪಿಗೂ ಲಾಭವಾಗಲಿದೆ.